ಯಳಂದೂರು: ತಾಲೂಕಿನ ಯರಿಯೂರು ಗ್ರಾಮದಲ್ಲಿರುವ ಕೆನರಾ ಬ್ಯಾಂಕನ್ನು ಯಳಂದೂರು ಪಟ್ಟಣದ ಶಾಖೆಗೆ ವಿಲೀನಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಯರಿಯೂರು ಗ್ರಾಮಸ್ಥರು ಹಾಗೂ ಬ್ಯಾಂಕಿನ ಗ್ರಾಹಕರು ಶನಿವಾರ ಬ್ಯಾಂಕಿನ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮುಖಂಡ ಜೆ. ಮಹೇಶ್ ಮಾತನಾಡಿ, ೨೦೧೭ ರಲ್ಲಿ ಆರ್‌ಬಿಐನ ನಿಯಮಗಳಿಗನುಸಾರವಾಗಿ ಯರಿಯೂರು ಗ್ರಾಮದಲ್ಲಿ ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಾಯಿತು. ಈ ಬ್ಯಾಂಕ್ ಆರಂಭಗೊಂಡ ನಂತರ ಇಲ್ಲಿ ಉತ್ತಮ ವಹಿವಾಟು ನಡೆಸುತ್ತಿದೆ. ೨ ಸಾವಿರ ಗ್ರಾಹಕರನ್ನು ಬ್ಯಾಂಕ್ ಹೊಂದಿದೆ. ನಂತರ ಕೇಂದ್ರ ಸರ್ಕಾರ ಹಲವು ಬ್ಯಾಂಕ್‌ಗಳನ್ನು ವಿಲೀನಗೊಳಿಸಿದ ನಂತರ ಈ ಬ್ಯಾಂಕ್ ಕೆನರಾ ಬ್ಯಾಂಕಾಗಿ ಪರಿವರ್ತನೆಗೊಂಡಿತು. ನಂತರ ಇಲ್ಲಿ ಇನ್ನಷ್ಟು ಉತ್ತಮ ವಹಿವಾಟು ಆರಂಭಗೊಂಡಿತು. ಆದರೆ ಈಗ ಇದ್ದಕ್ಕಿದ್ದಂತೆ ಈ ಬ್ಯಾಂಕನ್ನು ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಗೆ ವಿಲೀನಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.
ಆದರೆ ಇದು ಇನ್ನು ಅಪೂರ್ಣವಾಗಿದೆ. ಪ್ರತಿ ಗ್ರಾಮಸ್ಥರು ಈಗ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾರೆ. ಸರ್ಕಾರದ ಅನೇಕ ಯೋಜನೆಗಳ ಹಣ ಬ್ಯಾಂಕಿಗೆ ನೇರವಾಗಿ ವರ್ಗಾವಣೆಯಾಗುವುದರಿಂದ ಪ್ರತಿನಿತ್ಯ ನೂರಾರು ಗ್ರಾಹಕರು ಬ್ಯಾಂಕಿಗೆ ಎಡತಾಕುತ್ತಾರೆ. ಗ್ರಾಮೀಣ ಭಾಗದಲ್ಲಿ ಬ್ಯಾಂಕ್ ಇರುವುದರಿಂದ ವಹಿವಾಟು ಸುಲಭವಾಗುತ್ತದೆ. ಆದರೆ ಇದನ್ನು ವಿಲೀನಗೊಳಿಸಿದರೆ ಪಟ್ಟಣಕ್ಕೆ ತೆರಳಿ ಅಲ್ಲಿ ವ್ಯವಹಾರ ಮಾಡಲು ವಿಳಂಬವಾಗುತ್ತದೆ. ಅಲ್ಲದೆ ಗ್ರಾಹಕರ ಸಂಖ್ಯೆ ಅಧಿಕವಾಗುವುದರಿಂದ ಗಂಟೆ ಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬ್ಯಾಂಕಿನಲ್ಲಿ ಹಣ ಪಡೆದುಕೊಳ್ಳಲು, ಕಟ್ಟಲು ತೊಂದರೆಯಾಗುತ್ತದೆ. ಗ್ರಾಮೀಣ ಕೂಲಿ ಕಾರ್ಮಿಕರು ತಮ್ಮ ಕೂಲಿಯನ್ನು ಬಿಟ್ಟು ಅರ್ಧದಿನವನ್ನು ಇದಕ್ಕೆ ಮೀಸಲಾಗಿಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅಲ್ಲದೆ ವಯಸ್ಸಾದವರಿಗೆ ಹಾಗೂ ಮಹಿಳೆಯರು, ವಿಕಲಚೇತನರಿಗೆ ಇದರಿಂದ ಹೆಚ್ಚಿನ ತೊಂದರೆಯಾಗುತ್ತದೆ.
ಒಂದು ಬ್ಯಾಂಕ್ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಬೇಕಾದರೆ ಅತಿ ಕಷ್ಟದ ಕೆಲಸವಾಗುತ್ತದೆ. ಇದಕ್ಕೆ ನೂರಾರು ನಿಯಮಗಳಿರುತ್ತದೆ. ಆದರೆ ಇಲ್ಲಿರುವ ಬ್ಯಾಂಕನ್ನು ಬೇರೆ ಬ್ಯಾಂಕ್‌ಗೆ ವಿಲೀನಗೊಳಿಸುತ್ತಿರುವ ಕ್ರಮ ಖಂಡನಾರ್ಹವಾಗಿದೆ. ಹಾಗಾಗಿ ಕೂಡಲೇ ಈ ಪ್ರಕ್ರಿಯೆಯನ್ನು ಸಂಬಂಧಪಟ್ಟ ಉನ್ನತಮಟ್ಟದ ಅಧಿಕಾರಿಗಳು ಕೈಬಿಡಬೇಕು. ಈ ಬಗ್ಗೆ ಲೀಡ್ ಬ್ಯಾಂಕ್ ಮ್ಯಾನೇಜರ್ ಹಾಗೂ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗುವುದು. ಈ ಪ್ರಕ್ರಿಯೆಯನ್ನು ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಇದನ್ನು ಇಲ್ಲಿ ಉಳಿಸಲು ಸಂಬಂಧಪಟ್ಟವರ ಜೊತೆ ಮಾತುಕತೆ ನಡೆಸಿ ಗ್ರಾಮೀಣರ ನೆರವಿಗೆ ನಿಲ್ಲಬೇಕು ಎಂದು ಮನವಿ ಮಾಡಿದರು.ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ರಮೇಶ್, ಗೋವಿಂದಶೆಟ್ಟಿ, ಆನಂದ್, ಅಂಗಡಿ ಮಹೇಶ್, ಮಹದೇವಶೆಟ್ಟಿ, ಜಯಣ್ಣ, ರತ್ನಮ್ಮ, ಮಹದೇವಮ್ಮ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು, ಮಹಿಳಾ ಸಂಘದ ಪದಾಧಿಕಾರಿಗಳು ಹಾಜರಿದ್ದರು.