ನವದೆಹಲಿ/ಬೆಂಗಳೂರು: ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ, ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ ಜಿಲ್ಲಾ ಕೇಂದ್ರಗಳಲ್ಲಿ, ಹಲವು ಸಂಘ ಸಂಸ್ಥೆಗಳಲ್ಲಿ, ಶಾಲೆ-ಕಾಲೇಜುಗಳಲ್ಲಿ ಇಂದು ಬುಧವಾರ ಜೂನ್ 21ರಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯುತ್ತಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಇಂದು ಬೆಳಗ್ಗೆಯೇ ರಾಷ್ಟ್ರಪತಿ ಭವನದಲ್ಲಿ ಅಲ್ಲಿನ ಸಿಬ್ಬಂದಿಗಳು ಹಾಗೂ ಇತರರೊಂದಿಗೆ ಯೋಗದಲ್ಲಿ ಪಾಲ್ಗೊಂಡರು. ಉಪ ರಾಷ್ಟ್ರಪತಿ ಜಗದೀಪ್ ಧನ್ ಕರ್ ಸಹ ಯೋಗದಲ್ಲಿ ಪಾಲ್ಗೊಂಡರು.
ಯೋಗ ದಿನಕ್ಕೆ ಪ್ರಧಾನಿ ಮೋದಿ ಸಂದೇಶ: ಯೋಗದ(Yoga) ಮಹತ್ವವನ್ನು ಜಗತ್ತಿಗೆ ಸಾರಿದ ದೇಶ ಭಾರತ. ಈಗ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶ್ವ ಸಂಸ್ಥೆಯಲ್ಲಿ ನಡೆಯಲಿರುವ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಇಂದು ಬೆಳಗ್ಗೆಯೇ ಯೋಗ ದಿನದ ಅಂಗವಾಗಿ ವಿಡಿಯೊ ಸಂದೇಶ ಕಳುಹಿಸಿರುವ ಪ್ರಧಾನಿ ಮೋದಿ ಯೋಗವು ಜಾಗತಿಕ ಚೇತನವಾಗಿದೆ ಮತ್ತು ಜಗತ್ತನ್ನು ಒಂದುಗೂಡಿಸುತ್ತದೆ ಎಂದು ಹೇಳಿದ್ದಾರೆ. 180ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪ್ರಧಾನಿ ಮೋದಿ ಮುನ್ನಡೆಸುವ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಭಾರತ ದೇಶದ ಕರೆಗೆ 180 ಕ್ಕೂ ಹೆಚ್ಚು ದೇಶಗಳು ಒಟ್ಟಾಗಿ ಬರುವುದು ಐತಿಹಾಸಿಕ: ವಿಶ್ವಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನಿ ಮೋದಿ (ಭಾರತೀಯ ಕಾಲಮಾನ ಇಂದು ಸಂಜೆ 5.30ಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಾನು ವಿಶ್ವಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಆಯೋಜಿಸಲಾಗುತ್ತಿರುವ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಭಾರತದ ಕರೆಗೆ 180ಕ್ಕೂ ಹೆಚ್ಚು ದೇಶಗಳು ಒಗ್ಗೂಡಿರುವುದು ಐತಿಹಾಸಿಕ. 2014 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಯೋಗ ದಿನದ ಪ್ರಸ್ತಾಪ ಬಂದಾಗ, ಅದನ್ನು ದಾಖಲೆ ಸಂಖ್ಯೆಯ ದೇಶಗಳು ಬೆಂಬಲಿಸಿದವು ಎಂದು ವಿಡಿಯೊ ಸಂದೇಶದಲ್ಲಿ ಸ್ಮರಿಸಿಕೊಂಡಿದ್ದಾರೆ.
ಯೋಗ ದಿನ ಆಚರಣೆ ಈಗ ಜಾಗತಿಕ ಉತ್ಸವ ರೀತಿ ಆಗಿದೆ. ಈ ವರ್ಷ ಯೋಗದ ಘೋಷವಾಕ್ಯ ವಸುದೈವ ಕುಟುಂಬಕಂ ಎಂದಾಗಿದ್ದು, ಲಕ್ಷಾಂತರ ಜನರು ಯೋಗ ಮಾಡುತ್ತಿದ್ದಾರೆ. ಯೋಗವು ಜಗತ್ತನ್ನು ಒಂದುಗೂಡಿಸುತ್ತದೆ. ಏಕ್ ಭಾರತ್, ಶ್ರೇಷ್ಠ್ ಭಾರತ್ ಎಂದು ನಾವು ಭಾರತವನ್ನು ವಿಶ್ವಕ್ಕೆ ಪ್ರತಿನಿಧಿಸಬೇಕಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಇಂದು ಯೋಗ ದಿನ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಚಿವರು, ಸಿಬ್ಬಂದಿಗಳು, ಅಧಿಕಾರಿಗಳು, ಕರ್ನಾಟಕದಲ್ಲಿ ಸಚಿವರು ಪಾಲ್ಗೊಂಡಿದ್ದಾರೆ. ವಿಧಾನಸೌಧ ಮುಂದೆ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಂಪುಟ ಸಚಿವರು, ಅತಿಥಿಗಳು, ಸಿಬ್ಬಂದಿ, ಅಧಿಕಾರಿಗಳು ಪಾಲ್ಗೊಂಡಿದ್ದಾರೆ.