ಧಾರವಾಡ: ಧಾರವಾಡದ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿ ನಾಶದ ಆರೋಪದ ಮೇಲೆ ಸಿಬಿಐನಿಂದ ಬಂಧಿತನಾಗಿರುವ ಶಾಸಕ ವಿನಯ್ ಕುಲಕರ್ಣಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಈ ಹಿಂದೆ ಸಿಬಿಐ ತನಿಖೆಯಲ್ಲಿ ಬಂಧಿತರಾಗಿ ಸೆರೆವಾಸ ಅನುಭವಿಸಿದ್ದ ಅವರು, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುತ್ತಿರುವ ಆರೋಪದ ಮೇಲೆ ಜಾಮೀನು ರದ್ದು ಮಾಡಲಾಗಿತ್ತು.
ಇದೀಗ ಮಗ ಹೇಮಂತ್ ಅವರ ಕಾಲಿನ ಶಸ್ತ್ರಚಿಕಿತ್ಸೆಗೆ ಹಾಜರಾಗಬೇಕೆಂದು ಕೋರಿದ ಅರ್ಜಿಯನ್ನು ನ್ಯಾಯಾಲಯ ಅಂಗೀಕರಿಸಿ, ಸೆಪ್ಟೆಂಬರ್ 11ರ ಸಂಜೆ 5 ಗಂಟೆಗೆ ಸಿಬಿಐ ಎದುರು ಹಾಜರಾಗುವ ಷರತ್ತಿನೊಂದಿಗೆ ಮಧ್ಯಂತರ ಜಾಮೀನು ನೀಡಿದೆ.
ಶಸ್ತ್ರ ಚಿಕಿತ್ಸೆ ಬೆಂಗಳೂರಿನಲ್ಲಿ ನಡೆಯುತ್ತಿರುವುದರಿಂದ ಶಾಸಕರು ಎರಡು ದಿನಗಳ ಕಾಲ ಬೆಂಗಳೂರಿನಲ್ಲೇ ಉಳಿಯಲಿದ್ದಾರೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಸಭೆ ಅಥವಾ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.