ಕನಕಪುರ: ನನ್ನ ನಾಯಕತ್ವದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಕ್ಕೆ ನೀವು ಹಿಂದೆಂದೂ ಪಡೆದುಕೊಳ್ಳದ ಉಚಿತಗಳನ್ನು ನಿಮಗೆ ನೀಡುತ್ತಿದ್ದೇವೆ. ಇದು ನಮ್ಮ ಕೊಡುಗೆ, ಇದು ದೇಶಕ್ಕೆ ಮಾದರಿ, ನಮ್ಮನ್ನು ದೇಶ ನೋಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.
ಕನಕಪುರ ತಾಲೂಕಿನ ಕಲ್ಲಹಳ್ಳಿ, ಶಿವನಹಳ್ಳಿ, ಕಬ್ಬಾಳು, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ, ಹಾರೋಹಳ್ಳಿ ಜಿ.ಪಂ. ವ್ಯಾಪ್ತಿಗಳಲ್ಲಿ ಮತದಾರರಿಗೆ ಅಬಿನಂದನೆ ಸಮಾರಂಭದಲ್ಲಿ ಮಾತನಾಡಿದರು.
ನಾವು ಕೊಟ್ಟ ಕೊಡುಗೆಗಳಿಂದ ಬಿಜೆಪಿ ಮತ್ತು ಜೆಡಿಎಸ್ ನವರು ನಮ್ಮನ್ನು ಟೀಕಿಸುತ್ತಿದ್ದಾರೆ ಅವರನ್ನು ನಾವು ಬೇಡ ಎನ್ನುವುದಿಲ್ಲ , ಆದರೆ ನಿಮ್ಮ ಖಾತೆಗೆ ೧೫ ಲಕ್ಷ ಹಾಕುವುದಾಗಿ ಹೇಳಿದ್ದರಲ್ಲ ಬಂತ ಅಚ್ಚೆ ದಿನ್ ಬಂತ, ಸಾಲ ಮನ್ನಾ ಬಂತ, ಆದಾಯ ಡಬ್ಬಲ್ ಆಯ್ತ, ಉದ್ಯೋಗ ಬಂತ ಮೊದಲು ಇದನ್ನು ಕೇಳಿ ಎಂದು ಮತದಾರರಿಗೆ ಹೇಳಿದರು.
ಬಿಜೆಪಿಯವರು ನಮಗೆ ಕೊಟ್ಟಿದ್ದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರಲ್ಲ ಅದನ್ನು ಇಂದು ಮತ್ತೆ ಸಚಿವ ಸಂಪುಟದಲ್ಲಿ ವಾಪಸು ಪಡೆಯಲು ಈಗಾಗಲೇ ಪ್ರಯತ್ನ ಆರಂಬಿಸಿದ್ದೇನೆ ನೀವು ಕೊಟ್ಟ ಮತಕ್ಕೆ ನಾನು ನಿಮಗೆ ಕೊಟ್ಟ ಮಾತಿನಂತೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಅಭಿವೃದ್ದಿ ಮಾಡಲಾಗುವುದು ಎಂದರು.
ಬೆಲೆ ಎರಿಕೆ ಗಗನಕ್ಕೆ, ಆದಾಯ ತಳಕ್ಕೆ ಆಗಿದೆ ಇದರಿಂದ ವಿದ್ಯುತ್ ಉಚಿತ, ೨೦೦೦ ಖಚಿತ, ೧೦ ಕಿಲೋ ಅಕ್ಕಿ ಉಚಿತ, ಶಕ್ತಿ ಪ್ರಯಾಣ ನಿಶ್ಚಿತ , ಯುವಕರಿಗೆ ಪ್ರತ್ಯೇಕ ೩೦೦೦ ರೂ ಕೊಡಲು ಸಿದ್ದತೆ ಮಾಡುತ್ತಿದ್ದೇವೆ, ಇದಕ್ಕೆಲ್ಲಾ ಕುಟುಂಬಕ್ಕೆ ೫೦ ರಿಂದ ೧ ಲಕ್ಷದ ವರೆಗೆ ವೆಚ್ಚವಾಗಲಿದೆ ಎಂದರು.
ಕನಕಪುರ ತಾಲೂಕಿನ ಅಭಿವೃದ್ದಿಗೆ ಮುಖಂಡರು ಹಾಗು ಅಧಿಕಾರಿಗಳ ಜೊತೆಗೆ ಚರ್ಚಿಸಿ ಮಾದರಿಯನ್ನಾಗಿ ಮಾಡಲಾಗುವುದು, ಸಿಲ್ಕ್ ಮತ್ತು ಮಿಲ್ಕ್ ನ್ನು ನಂಬಿರುವ ನೀವು ನನಗೆ ಚಿಕ್ಕ ವಯಸ್ಸಿನಲ್ಲಿ ಅಧಿಕಾರ ಕೊಟ್ಟಿದ್ದೀರಿ, ಎಂತಹ ಅಧಿಕಾರ ಬಂದರೂ ಸಹ ನಾನು ನಿಮ್ಮ, ಸೇವಕನಾಗಿ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದರು.
ನೀವು ಕೊಟ್ಟಂತ ತೀರ್ಪು, ರಾಷ್ಟ್ರದ ಜನ ನೋಡಿದ್ದಾರೆ. ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು. ಜೀವನದಲ್ಲಿ ಯಾವುದು ಶಾಶ್ವತ ಅಲ್ಲ. ಕ್ಷೇತ್ರದಲ್ಲಿ ನೀವೆ ಅಭ್ಯರ್ಥಿ ಆಗಿದ್ರಿ. ನೀವೆ ನನ್ನನ್ನ ಹರಸಿ, ಅಣ್ಣತಮ್ಮನ ರೀತಿ ಪ್ರೀತಿ ತೋರಿಸಿದ್ರಿ. ಎಲ್ಲಾ ಭಿನ್ನಾಭಿಪ್ರಾಯ ಬಿಟ್ಟು ಮತ ಕೊಟ್ಟಿದ್ದೀರಿ. ನಾನು ಕ್ಷೇತ್ರಕ್ಕೆ ಬಂದು ಮತ ಕೇಳದಿದ್ರೂ ನೀವೆ ಚುನಾವಣೆ ಮಾಡಿದ್ರಿ. ನಾಮಪತ್ರ ಸಲ್ಲಿಸಿ ಕೊನೆಯ ದಿನ ಕ್ಷೇತ್ರಕ್ಕೆ ಬಂದಿದ್ದೆ. ಆದರೆ ನಿಮ್ಮ ಪ್ರೀತಿ ವಿಶ್ವಾಸ ನನ್ನನ್ನು ಗೆಲ್ಲಿಸಿದೆ. ಎಂದರು.

ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದಿರಿ. ನೀವು ಆತಂಕ, ನಿರಾಸೆಪಡುವ ಅಗತ್ಯವಿಲ್ಲ. ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ. ಈಗ ನಾನು, ಸಿದ್ದರಾಮಯ್ಯ, ಸಚಿವ ಸಂಪುಟ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ ಎಂದರು.
ನಾನು ಸಿದ್ದರಾಮಯ್ಯನವರು ನಾಡ ದೇವತೆ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಿ ನಾವು ಕೊಟ್ಟಿರುವ ಮಾತು ಉಳಿಸಿಕೊಳ್ಳುವ ಹಾಗೂ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಾಮರ್ಥ್ಯ ಕೊಡುವಂತೆ ಕೇಳಿಕೊಂಡಿದ್ದೆವು. ದೇಶ ಹಾಗೂ ರಾಜ್ಯದ ಇತಿಹಾಸದಲ್ಲಿ ಒಂದೇ ದಿನ ಐದು ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತೀರ್ಮಾನ ನಿನ್ನೆ ಕೈಗೊಳ್ಳಲಾಗಿದೆ. ಇದರಿಂದ ಬಿಜೆಪಿ ಹಾಗೂ ಜೆಡಿಎಸ್ ನವರ ದುಃಖ, ದುಗುಡ ಹೆಚ್ಚಾಗಿದ್ದು, ರಾಜ್ಯದ ಜನ ನೋಡುತ್ತಿದ್ದಾರೆ. ನೀವೆಲ್ಲರೂ ನಿಮ್ಮ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಈ ಯೋಜನೆ ಲಾಭ ಸಿಗುವಂತೆ ಮಾಡಬೇಕು.
ಗೃಹಲಕ್ಷ್ಮಿ ಯೋಜನೆಗೆ ಜೂನ್ ೧೫ರಿಂದ ಆನ್ ಲೈನ್ ಹಾಗೂ ಆಫ್ ಲೈನ್ ಅರ್ಜಿ ಕರೆಯಲಾಗುವುದು. ನೀವು ಮನೆ ಮನೆಗೆ ಹೋಗಿ ಅವರ ಮಾಹಿತಿ, ದಾಖಲೆ ಸಂಗ್ರಹಿಸಿ ಅರ್ಜಿ ತುಂಬಿ ಅವರಿಗೆ ಈ ಯೋಜನೆ ಸಿಗುವಂತೆ ಮಾಡಬೇಕು. ಮನೆಯೊಡತಿ ಯಾರು ಎಂದು ಕುಟುಂಬದವರೇ ತೀರ್ಮಾನ ಮಾಡಬೇಕು. ಒಂದು ವೇಳೆ ಮನೆಯೊಡತಿ ಹೆಸರಲ್ಲಿ ಗಂಡಸರ ಬ್ಯಾಂಕ್ ಖಾತೆ ಕೊಟ್ಟರೆ ಆ ಅರ್ಜಿ ಊರ್ಜಿತವಾಗುವುದಿಲ್ಲ. ಹೀಗಾಗಿ ಮಹಿಳೆಯರ ಬ್ಯಾಂಕ್ ಖಾತೆಯನ್ನೇ ಪಡೆಯಿರಿ. ಎಂದರು.
ನನ್ನ ತಾಲೂಕಿನಲ್ಲಿ ಆಸ್ಪತ್ರೆ ನೀಡುವುದು ಈ ಕ್ಷೇತ್ರಕ್ಕೆ ನನ್ನ ಮೊದಲ ಕಾರ್ಯಕ್ರಮ. ಇಲ್ಲಿನ ಜನ ವಿದ್ಯೆ ಹಾಗೂ ಆರೋಗ್ಯ ಸೌಲಭ್ಯಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸುವುದು ನನ್ನ ಗುರಿ. ಕನಕಪುರ ರಸ್ತೆ ಅಭಿವೃದ್ದಿಗೆ ನಾನು ಹಾಗೂ ಸುರೇಶ್ ಅವರು ಗುತ್ತಿಗೆದಾರರನ್ನು ಭೇಟಿ ಮಾಡಿ ಈ ಕಾಮಗಾರಿ ಮುಕ್ತಾಯಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಭರವಸೆ ನೀಡಿದರು.
ನಾನು ಈ ಕ್ಷೇತ್ರದ ಎಲ್ಲಾ ಜನರ ಜೇಬಿಗೆ ಹಣ ಹಾಕಲು ಸಾಧ್ಯವಿಲ್ಲ. ಆದರೆ ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗುವಂತೆ ಮಾಡುತ್ತೇನೆ. ಕೆರೆ ತುಂಬಿಸಲು ಆದ್ಯತೆ ನೀಡಲಾಗಿದೆ. ಕಳೆದ ಬಾರಿ ಕೆರೆ ತುಂಬಿಸಿ ಬತ್ತಿಹೋಗಿದ್ದ ಕೊಳವೆ ಬಾವಿಗೆ ಮರು ಜೀವ ನೀಡಲಾಗಿದೆ. ರೇಷ್ಮೆ, ಹೈನುಗಾರಿಕೆ, ತೋಟಗಾರಿಕೆಯಲ್ಲಿ ಆರ್ಥಿಕ ಶಕ್ತಿ ನೀಡಲು ಪ್ರಯತ್ನ ಮಾಡಿದ್ದೇವೆ.
ಮುಂದಿನ ದಿನಗಳಲ್ಲಿ ಕನಕಪುರ ಹಾಗೂ ರಾಮನಗರ ಜಿಲ್ಲೆಗೆ ಪ್ರತಿ ವಾರ ಒಂದು ದಿನ ಮೀಸಲಿಡುತ್ತೇನೆ. ಇಲ್ಲಿ ಪ್ರತ್ಯೇಕ ಕಚೇರಿ ಆರಂಭಿಸುತ್ತೇನೆ. ನಾನು ನಿಮ್ಮನ್ನು ಭೇಟಿ ಮಾಡಿ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಎಂದರು.
ಈ ಭಾಗದ ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಜೂಜು, ಚಟಗಳ ವಿಚಾರದಲ್ಲಿ ನನಗೆ ಯಾವುದೇ ದೂರು ಬರಬಾರದು. ತೊಲೂಕು, ಪಂಚಾಯ್ತಿ, ಪೊಲೀಸ್ ಠಾಣೆ ಸೇರಿದಂತೆ ಎಲ್ಲಾ ಕಡೆಗಳಲ್ಲಿ ಲಂಚಕ್ಕೆ ಕೊನೆಯಾಡಬೇಕು. ನಾವು ೪೦% ಕಮಿಷನ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದು, ಕಾನೂನುಬಾಹಿರವಾಗಿ ಯಾವುದೇ ಕೆಲಸ ಮಾಡಬಾರದು. ಎಚ್ಚರಿಸಿದರು.
ನಾವು ಗೆದ್ದಿದ್ದೇವೆ ಎಂದು ಬೇರೆ ಪಕ್ಷದ ಕಾರ್ಯಕರ್ತರನ್ನು ಹೀಯಾಳಿಸಬೇಡಿ. ಪ್ರತಿನಿತ್ಯ ನೀವು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆ ನಡೆಯಲಿದ್ದು, ಅದಕ್ಕೆ ನೀವು ಸಿದ್ಧರಾಗಬೇಕು. ಉಳಿದಿರುವ ಬೇರೆ ಪಕ್ಷದ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಮನಗರ ಶಾಸಕ ಇಕ್ಬಾಲ್ ಉಸೇನ್, ವಿಧಾನ ಪರಿಷತ್ ಸದಸ್ಯ ಎಸ್. ರವಿ,. ಪ್ರತಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಪಂಚಾಯಿತಿ ಅಧ್ಯಕ್ಷರು , ಉಪಾಧ್ಯಕ್ಷರು , ಸದಸ್ಯರು, ಮುಖಂಡರು ಹಾಗು ಕಾಯಕರ್ತರು ಪಾಲ್ಗೊಂಡಿದ್ದರು.