ಮಂಗಳೂರು (ದಕ್ಷಿಣ ಕನ್ನಡ): ಬಹುನಿರೀಕ್ಷಿತ ಕಾಂತಾರ 1 ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ದೇವರ ಮೊರೆ ಹೋಗಿದ್ದಾರೆ. ಈ ವರ್ಷವೇ ರಿಲೀಸ್ ಆಗಲಿರುವ ಕಾಂತಾರಾ ಶೂಟಿಂಗ್ ಆರಂಭದಲ್ಲಿ ಭರದಿಂದ ಸಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಅದೇಕೋ ತುಂಬಾ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿಯೇ ರಿಷಭ್ ಶೆಟ್ಟಿ ದೈವದ ಮೊರೆಹೋಗಿದ್ದಾರೆ.
ಮಂಗಳೂರಿನಲ್ಲಿ ನಡುರಾತ್ರಿ ಪಂಜುರ್ಲಿ ನೇಮಕ್ಕೆ ಬಂದು ಬೇಡಿಕೊಂಡ ರಿಷಬ್ ಶೆಟ್ಟಿ, ರಾತ್ರಿ 11 ಗಂಟೆಯಿಂದ ನಸುಕಿನ 4 ಗಂಟೆ ವರೆಗೂ ದೈವದ ಉತ್ಸವದಲ್ಲಿ ಡಿವೈನ್ ಸ್ಟಾರ್ ಭಾಗಿಯಾಗಿದ್ದಾರೆ. ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ವಾರ್ಷಿಕ ಉತ್ಸವದಲ್ಲಿ ರಿಷಬ್ ಭಾಗಿಯಾಗಿದ್ದಾರೆ.
ಪಂಜುರ್ಲಿ ಕೋಲದಲ್ಲಿ ರಾತ್ರಿಯಿಂದ ಬೆಳಗಿನವರೆಗೂ ಪತ್ನಿ ಮತ್ತು ಮಕ್ಕಳೊಂದಿಗೆ ರಿಷಬ್ ಶೆಟ್ಟಿ ಭಾಗಿಯಾಗಿದ್ದಾರೆ. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ಬಳಿ ರಿಷಬ್ ಕಷ್ಟ ಹೇಳಿಕೊಂಡಿದ್ದಾರೆ.
ಆಗ ‘ಜಗತ್ತಿನೆಲ್ಲೆಡೆ ನಿನಗೆ ದುಶ್ಮನ್‌ಗಳಿದ್ದಾರೆ, ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ’, ‘ನನಗೆ ಸೇವೆ ನೀಡುವ ಹರಕೆ ಹೇಳಿಕೋ, ಐದು ತಿಂಗಳ ಗಡುವಲ್ಲಿ ಒಳ್ಳೆದು ಮಾಡುತ್ತೇನೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ಹರಕೆ ಮಾಡಿಕೊ.. ಐದು ತಿಂಗಳ ಗಡುವಲ್ಲಿ ಒಳ್ಳೇದು ಮಾಡುತ್ತೇನೆ ಎಂದು ಪಂಜುರ್ಲಿ ದೈವ ರಿಷಬ್ ಶೆಟ್ಟಿಗೆ ಧೈರ್ಯ ನೀಡಿದ್ದಾರೆ.