ಬೆಂಗಳೂರು : 2028 ರವರೆಗೆ ನೀವೇ ಕರ್ನಾಟಕದ ಮುಖ್ಯಮಂತ್ರಿ ಆಗಿರಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಗಳ ಅರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ಕ್ಷೇತ್ರದ ಕಾಂಗ್ರೆಸ್ ಶಾಸಕರ ಬಸವರಾಜ ರಾಯರೆಡ್ಡಿ ಪತ್ರ ಬರೆದಿದ್ದಾರೆ.
6-1-2026 ರವರೆಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಸುದೀರ್ಘ ಮತ್ತು ಸಾರ್ಥಕ ಆಡಳಿತದ ಮೂಲಕ ಚಾರಿತ್ರಿಕ ದಾಖಲೆ ನಿರ್ಮಿಸುತ್ತಿರುವುದು ರಾಜ್ಯದ ಜನತೆಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಹಾಗೂ ಮುಂದಿನ ಎರಡುವರೆ ವರ್ಷಗಳ ಕಾಲ ಅಂದರೆ 28 ಮೇ 2028 ರವರೆಗೆ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿರಿ ಎಂದು ನನ್ನ ನಂಬಿಕೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಕರ್ನಾಟಕ ಸಾಮಾಜಿಕ ನ್ಯಾಯ ಹಾಗೂ ಜನಪರ ಸರ್ವಾಂಗೀಣ ಅಭಿವೃದ್ಧಿ ಪರಂಪರೆಯನ್ನು ಸಮರ್ಥವಾಗಿ ಮುಂದುವರೆಸುತ್ತಿರುವ ನಿಮ್ಮ ದೂರದೃಷ್ಟಿಯ ನಾಯಕತ್ವಕ್ಕೆ ಅಭಿನಂದನೆಗಳು ಸಲ್ಲಿಸುತ್ತಾ, ಕರ್ನಾಟಕದ ರಾಜಕೀಯ ಇತಿಹಾಸವು ಜನಪರ ಆಡಳಿತ, ಸಾಮಾಜಿಕ ನ್ಯಾಯ ಹಾಗೂ ಸಂವಿಧಾನಾತ್ಮಕ ಸಮಾನತೆಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ನಾಯಕರ ದಿಟ್ಟ ಹೋರಾಟಗಳಿಂದ ರೂಪುಗೊಂಡ ಸುವರ್ಣ ಪರಂಪರೆಯನ್ನು ಹೊಂದಿದೆ.
ನಿಮ್ಮ ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತವು ಸ್ಪಷ್ಟವಾಗಿ ಜನಪರ, ಸಾಂವಿಧಾನಬದ್ಧ ಮತ್ತು ಸಾಮಾಜಿಕ ನ್ಯಾಯ ಕೇಂದ್ರಿತವಾಗಿದೆ. ರಾಜ್ಯದ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದ ಜನಾಂಗಕ್ಕೆ ಯಾವುದೇ ಧರ್ಮ ಜಾತಿ ಭೇದವಿಲ್ಲದೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್, ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಹಾಗೂ ರೈತ ಸಮುದಾಯಕ್ಕೆ ಮಹತ್ವಾಕಾಂಕ್ಷಿ ಯೋಜನೆಗಳ ಮೂಲಕ ಬಡವರು, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವವನ್ನು ಒದಗಿಸುವಲ್ಲಿ ನಿಮ್ಮ ನಿಮ್ಮ ಪ್ರಾಮಾಣಿಕ ವಿಚಾರಗಳು ಮಹತ್ವದ ಪಾತ್ರ ವಹಿಸಿದೆ.
ಈ ಯೋಜನೆಗಳು ಕರ್ನಾಟಕವನ್ನು ನಿಜಾರ್ಥದಲ್ಲಿ ಕಲ್ಯಾಣರಾಜ್ಯದ ಮಾದರಿಯಾಗಿ ರೂಪಿಸುವ ದಿಟ್ಟ ರಾಜಕೀಯ ಸಂಕಲ್ಪದ ಪ್ರತಿಬಿಂಬಗಳಾಗಿವೆ. ನಿಮ್ಮ ಆಡಳಿತದಲ್ಲಿ ಪಾರದರ್ಶಕತೆ, ಹಣಕಾಸು ಶಿಸ್ತು, ಸಂವಿಧಾನದ ಮೌಲ್ಯಗಳಿಗೆ ಅಚಲ ನಿಷ್ಠೆ ಹಾಗೂ ಜಾತಿ, ಧರ್ಮ, ಭಾಷೆಗಳ ಅತೀತವಾಗಿ ಎಲ್ಲರನ್ನು ಒಟ್ಟಿಗೆ ಕೊಂಡೊಯ್ಯುವ ಸಮನ್ವಯದ ರಾಜಕಾರಣವು ನಿಮ್ಮ ನಾಯಕತ್ವದ ವಿಶಿಷ್ಟ ಗುರುತುಗಳಾಗಿವೆ.
ನಿಮ್ಮ ಆಡಳಿತವು ಮುಂದಿನ ಪೀಳಿಗೆಗಳಿಗೆ ದಾರಿದೀಪವಾಗಲಿ. ಕರ್ನಾಟಕವು ಸರ್ವಾಂಗೀಣ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸೌಹಾರ್ದದ ಮಾದರಿ ರಾಜ್ಯವಾಗಿ ರಾಷ್ಟ್ರಮಟ್ಟದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ದೃಢಪಡಿಸಲಿ ಎಂಬುದು ನನ್ನ ಹಾರೈಕೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



