ಶಿವಮೊಗ್ಗ: ಅನಾರೋಗ್ಯದಿಂದ ಬಳಲುತ್ತಿದ್ದ ಖಾಸಗಿ ಟಿವಿ ಚಾನಲ್ ಶಿವಮೊಗ್ಗ ಜಿಲ್ಲಾ ವರದಿಗಾರ ಶಶಿಧರ್ ಶನಿವಾರ ಸಂಜೆ ಅಕಾಲಿಕ ನಿಧನ ಹೊಂದಿದ್ದಾರೆ.
ಪಬ್ಲಿಕ್ ಟಿವಿಯಲ್ಲಿ ಕಳೆದ ೬ ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ಶಶಿಧರ್ ಮೂಲತಃ ಅರಸೀಕೆರೆ ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಅವರಿಗೆ ೪೦ ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ತಂದೆ-ತಾಯಿಯನ್ನು ಅಗಲಿದ್ದಾರೆ. ಶಶಿಧರ್ ಕಳೆದ ೧೬ ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.
ಶಶಿಧರ್ ಅವರ ಅಕಾಲಿಕ ಮರಣ ಶಿವಮೊಗ್ಗ ಮಾತ್ರವಲ್ಲ ರಾಜ್ಯದ ಪತ್ರಕರ್ತರ ಪಾಲಿಗೆ ನುಂಗಲಾರದ ತುತ್ತಾಗಿದೆ. ನಾಳೆ ಹುಟ್ಟೂರಿನಲ್ಲಿ ಶಶಿಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಶಶಿ ಅವರ ಸಾವಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಶಾಖೆ ಕಂಬನಿ ಮಿಡಿದಿದೆ.