Tuesday, April 22, 2025
Google search engine

Homeರಾಜ್ಯಸುದ್ದಿಜಾಲಯುವಜನತೆಗೆ ದೇಶ ಕಟ್ಟುವ ಶಕ್ತಿ ಇದೆ : ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಭಿಮತ

ಯುವಜನತೆಗೆ ದೇಶ ಕಟ್ಟುವ ಶಕ್ತಿ ಇದೆ : ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅಭಿಮತ

ಚಾಮರಾಜನಗರ: ಭಾರತ ಅಪಾರವಾದ ಯುವಶಕ್ತಿ, ಸಂಪನ್ಮೂಲಗಳನ್ನು ಹೊಂದಿದ್ದು, ಯುವಜನತೆಗೆ ದೇಶ ಕಟ್ಟುವ ಶಕ್ತಿ ಇದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ಅಭಿಪ್ರಾಯಪಟ್ಟರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಂಯುಕ್ತಾಶ್ರಯದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಸಮಾರಂಭವನ್ನು ಉದ್ಘಾಟಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯುವಶಕ್ತಿ ರಾಷ್ಟ್ರದ ಸಂಪತ್ತು. ಯುವಶಕ್ತಿಯನ್ನು ಬಡಿದೆಚ್ಚರಿಸಿ ಜಾಗೃತಗೊಳಿಸಿದ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ೨೦೨೪ರ ಜನವರಿ ೧೨ರಂದು ಆಚರಿಸಲಾಗುತ್ತಿದೆ. ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಯುವಜನೋತ್ಸವದ ಹಬ್ಬದಲ್ಲಿ ಎಲ್ಲಾ ಯುವಕ, ಯುವತಿಯರು ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದರು.
ಯುವಜನೋತ್ಸವದಲ್ಲಿ ಕಲಾವಿದರು ಜಾನಪದ ಗೀತೆ, ಜನಪದ ನೃತ್ಯ, ಚರ್ಚಾಸ್ಪರ್ಧೆ, ಛಾಯಾಚಿತ್ರ ಸ್ಪರ್ಧೆ ಸೇರಿದಂತೆ ೮ ಬಗೆಯ ಕಲೆಗಳನ್ನು ಅನಾವರಣಗೊಳಿಸಲಿದ್ದಾರೆ. ಯುವಜನರು ತಮ್ಮಲ್ಲಿರುವ ಕಲಾಪ್ರತಿಭೆಗಳನ್ನು ಅಭಿವ್ಯಕ್ತಪಡಿಸಿ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಉತ್ತಮ ಕೀರ್ತಿ ತರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.

ರಾಷ್ಟೀಯ ಯುವ ಪ್ರಶಸ್ತಿ ಪುರಸ್ಕೃತರಾದ ಸುರೇಶ್ ಋಗ್ವೇದಿ ಅವರು ಮಾತನಾಡಿ ಯುವಜನೋತ್ಸವ ಅದ್ಬುತ ಪ್ರತಿಭೆಗಳನ್ನು ಹೊರತರಲು ಸಹಕಾರಿಯಾಗಲಿದೆ. ಕಲೆ, ವಾಸ್ತುಶಿಲ್ಪ, ಸಂಗೀತ, ನೃತ್ಯ, ನಂದಿಧ್ವಜ ಕುಣಿತ, ಗೊರಕನ ಕುಣಿತ, ವೀರಗಾಸೆ, ಲಂಬಾಣಿ ಕಲೆಗಳು ಭಾರತದ ಸಾಂಸ್ಕೃತಿಕ ಶ್ರೇಷ್ಠತೆಯ ಮೌಲ್ಯಗಳಾಗಿವೆ. ದೇಶದ ಸಾಂಸ್ಕೃತಿಕ ಶ್ರೇಷ್ಠತೆಗೆ ಯುವಕರು ಶಕ್ತಿ ತುಂಬಬೇಕು. ಸ್ವಾಮಿ ವಿವೇಕಾನಂದರು ರಾಷ್ಟ್ರದ ಯುವಜನರ ಸ್ಪೂರ್ತಿ, ಶಕ್ತಿಯಾಗಿದ್ದು, ಅವರ ಆದರ್ಶ ಚಿಂತನೆಗಳನ್ನು ಯುವಕರು ಮೈಗೂಡಿಸಿಳ್ಳಬೇಕಾಗಿದೆ ಎಂದರು.

ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀನಿವಾಸಪ್ರಸಾದ್ ಅವರು ಮಾತನಾಡಿ ಚಾಮರಾಜನಗರ ಸಂಪದ್ಭರಿತ ಜನಪದ ಕಲೆಗಳ ಬೀಡಾಗಿದೆ. ತಮ್ಮಲ್ಲಿರುವ ಅಗಾಧ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವ ಉತ್ತಮ ವೇದಿಕೆಯಾಗಿದೆ. ಜಿಲ್ಲೆಯ ಪ್ರತಿಭೆಗಳು ರಾಷ್ಟಮಟ್ಟದಲ್ಲಿ ಹೆಸರು ಮಾಡಬೇಕು ಎಂದು ತಿಳಿಸಿದರು.
ಜಾನಪದ ಕಲಾವಿದರು ಹಾಗೂ ರಂಗಕರ್ಮಿ ಸಿ.ಎಂ. ನರಸಿಂಹಮೂರ್ತಿ ಅವರು ಮಾತನಾಡಿ ಜಿಲ್ಲೆ ಜಾನಪದ ಕಲೆಗಳ ತವರೂರು. ಯುವಜನೋತ್ಸವದಲ್ಲಿ ಯುವಜನರು ಹೆಚ್ಚಾಗಿ ಭಾಗವಹಿಸಬೇಕು. ಇತ್ತೀಚಿನ ದಿನಗಳಲ್ಲಿ ಯುವಜನತೆ ಮೊಬೈಲ್ ಮೋಡಿಗೆ ಒಳಗಾಗಿದ್ದು, ಯುವಜನೋತ್ಸವದಂತಹ ದೊಡ್ಡ ಉತ್ಸವಗಳಲ್ಲಿ ಸ್ಪರ್ಧಾಳುಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜಿಲ್ಲೆಯಲ್ಲಿ ಬುಡಕಟ್ಟು ಜನಜೀವನ ಕುರಿತ ಸಂಶೋಧನಾ ಅಧ್ಯಯನಕ್ಕಾಗಿ ಬುಡಕಟ್ಟು ಹಾಗೂ ಅಲೆಮಾರಿ ಸಮುದಾಯ ಭವನ ನಿರ್ಮಾಣವಾಗಬೇಕು ಎಂದರು.

ಜಿಲ್ಲಾ ಯುವಪ್ರಶಸ್ತಿ ಪುರಸ್ಕೃತರಾದ ಜಿ. ಬಂಗಾರು ಅವರು ಯುವಜನೋತ್ಸವದ ಉದ್ದೇಶ, ಮಹತ್ವದ ಕುರಿತು ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶಿವಸ್ವಾಮಿ, ಕ್ರೀಡಾ ತರಬೇತುದಾರರಾದ ಗಣೇಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು

RELATED ARTICLES
- Advertisment -
Google search engine

Most Popular