ಮೈಸೂರು: ಯುವ ಜನಾಂಗ ತಮ್ಮ ನಂತರ ಮಣ್ಣಲ್ಲಿ ಮಣ್ಣಾಗಿ ಹೋಗುವ ಸಂದರ್ಭದಲ್ಲಿ ತಮ್ಮ ಅಮೂಲ್ಯ ಅಂಗವಾಗಿರುವ ಕಣ್ಣನ್ನು ದಿವ್ಯಾಂದರ ಬಾಳಿನ ಬೆಳಕಾಗಲಿ ಎಂಬ ಉದ್ದೇಶದಿಂದ ದಾನ ಮಾಡುವ ಪ್ರತಿಜ್ಞೆ ಮಾಡಬೇಕು. ಇದರಿಂದ ಸಮಾಜದಲ್ಲಿನ ಅಂಧರ ಸಂಖ್ಯೆಯನ್ನು ಕಡಿಮೆ ಮಾಡುವುದರ ಜತೆಗೆ ಅವರ ಬದುಕಿನಲ್ಲಿ ಬೆಳಕು ಮೂಡಿಸಬಹುದು ಎಂದು ಕೆ.ಅರ್.ಆಸ್ಪತ್ರೆ ನೇತ್ರ ಸಂಗ್ರಹಣಾಧಿಕಾರಿ ಡಾ.ಪಿ.ಚಂದ್ರಕಲಾ ಕರೆ ನೀಡಿದರು.
ಕುವೆಂಪುನಗರದಲ್ಲಿರುವ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸಕ್ಷಮ ಘಟಕ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ನೇತ್ರದಾನದ ಮಹತ್ವ ಹಾಗೂ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು, ಯಾವುದೇ ವ್ಯಕ್ತಿ ನೈಸರ್ಗಿಕವಾಗಿ ಮರಣ ಹೊಂದಿದ ೬ ಗಂಟೆಗಳ ಒಳಗೆ ಮಾಹಿತಿ ನೀಡಿದರೆ ಅಂತಹವರ ಕಾರ್ನಿಯ ಪಡೆಯಲಾಗುತ್ತದೆ. ಈ ನಿಟ್ಟಿನಲ್ಲಿ ಯುವ ಸಮೂಹ ತಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಈ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಸಕ್ಷಮ ಘಟಕದ ಕಾರ್ಯದರ್ಶಿ ಅರುಣಾಚಲ ಶರ್ಮ ಮಾತನಾಡಿ, ಸಮದೃಷ್ಟಿ, ಕ್ಷಮತಾ ವಿಕಾಸ, ಅನುಸಂದಾನ ಪ್ರತಿಯೊಬ್ಬರ ಜೀವನದ ಗುರಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಎಂ.ಮಹದೇವಸ್ವಾಮಿ ಮಾತನಾಡಿ, ಒಬ್ಬರ ಎರಡು ಕಣ್ಣುಗಳು ೪ ದಿವ್ಯಾಂದರಿಗೆ ಬೆಳಕಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸ್ವ-ಇಚ್ಛೆಯಿಂದ ನೇತ್ರದಾನ ಮಾಡುವುದು ದೇಶದ ದಿವ್ಯಾಂದರು ಸುಂದರ ಜಗತ್ತನ್ನು ಕಾಣುವಂತಾಗಲು ತಮ್ಮ ಅಳಿಲು ಸೇವೆಯನ್ನು ಸಮಾಜಕ್ಕೆ ಸಲ್ಲಿಸಬೇಕು ಎಂದು ಕರೆ ನೀಡಿದರು. ಈ ಕಾರ್ಯಕ್ರಮವನ್ನು ದಿ ಇನ್ಸಿಟಿಟ್ಯೂಟ್ ಆಫ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಕುಬೇರ ಪಿ.ಗೌಡ ಉದ್ಘಾಟಿಸಿದರು. ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಟಿ.ರಮೇಶ್, ಸಕ್ಷಮ ಘಟಕ ಖಜಾಂಚಿ ಟಿ.ಎಸ್.ಜಯರಾಮ್ ಇದ್ದರು. ಉಪನ್ಯಾಸಕ ಮಣಿ ನಿರೂಪಿಸಿದರು. ಪ್ರಿಯಾಂಕ ಪ್ರಾರ್ಥಿಸಿದರು. ವಿದ್ಯಾರ್ಥಿ ಪ್ರಜ್ವಲ್ ವಂದಿಸಿದರು.