ತಿರುವನಂತಪುರಂ: ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ದಂಪತಿಗಳು ನಿನ್ನೆ ಕೇರಳದ ಪರಸ್ಸಾಲ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಇದನ್ನು ಆತ್ಮಹತ್ಯೆ ಎಂದು ಶಂಕಿಸಿದ್ದಾರೆ. ಅಸಹಜ ಗೈರುಹಾಜರಿಯನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಸೆಲ್ವರಾಜ್ (೪೫) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಪತ್ನಿ ೪೦ ವರ್ಷದ ಪ್ರಿಯಾ ಅವರ ಮೃತದೇಹ ಹಾಸಿಗೆಯ ಮೇಲೆ ಪತ್ತೆಯಾಗಿದೆ ಎಂದು ಪರಸ್ಸಾಲ ಪೊಲೀಸರು ತಿಳಿಸಿದ್ದಾರೆ.
ಸೆಲ್ವರಾಜ್ (೪೫) ಮತ್ತು ಅವರ ಪತ್ನಿ ಪ್ರಿಯಾ (೪೦) ಎಂದು ಗುರುತಿಸಲಾದ ದಂಪತಿಗಳು ‘ಸೆಲ್ಲು ಫ್ಯಾಮಿಲಿ’ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದರು. ಅವರ ಚಾನಲ್ ಸುಮಾರು ೧೮,೦೦೦ ಚಂದಾದಾರರನ್ನು ಹೊಂದಿದೆ. ಅವರು ೧,೪೦೦ ಕ್ಕೂ ಹೆಚ್ಚು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.
ದಂಪತಿಗಳ ಕೊನೆಯ ವೀಡಿಯೊ – ಶುಕ್ರವಾರ ರಾತ್ರಿ ಪೋಸ್ಟ್ ಮಾಡಲಾಗಿದೆ – ಅವರ ಫೋಟೋಗಳ ೫೫ ಸೆಕೆಂಡುಗಳ ಸಂಕಲನವಾಗಿದೆ. ಪ್ರಾಥಮಿಕ ತನಿಖೆಯಂತೆ ಎರಡು ದಿನಗಳ ಹಿಂದೆ ಸಾವು ಸಂಭವಿಸಿರಬಹುದು ಎಂದು ಹೇಳಲಾಗಿದೆ.