Friday, April 11, 2025
Google search engine

Homeಅಪರಾಧಝೀರೊ ಟ್ರಾಫಿಕ್‌ ನಿಯಮ ಉಲ್ಲಂಘನೆ: ಜನಾರ್ದನ ರೆಡ್ಡಿ ರೇಂಜ್​ರೋವರ್ ಕಾರು ಜಪ್ತಿ

ಝೀರೊ ಟ್ರಾಫಿಕ್‌ ನಿಯಮ ಉಲ್ಲಂಘನೆ: ಜನಾರ್ದನ ರೆಡ್ಡಿ ರೇಂಜ್​ರೋವರ್ ಕಾರು ಜಪ್ತಿ

ಗಂಗಾವತಿ(ಕೊಪ್ಪಳ): ಶಾಸಕ ಜನಾರ್ದನ ರೆಡ್ಡಿ ಅವರ ರೇಂಜ್ ರೋವರ್ ಕಾರು ಹಾಗೂ ಅವರ ಬೆಂಬಲಿಗರ ಎರಡು ಕಾರುಗಳನ್ನು ಮಂಗಳವಾರ ನಗರದ ಸಂಚಾರಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಗಂಗಾವತಿ ಮಾರ್ಗವಾಗಿ ಕೊಪ್ಪಳಕ್ಕೆ ತೆರಳುವ ಸಂದರ್ಭದಲ್ಲಿ ಝೀರೊ ಟ್ರಾಫಿಕ್‌ ನಿಯಮ ಉಲ್ಲಂಘಿಸಿದ್ದರಿಂದ ರೆಡ್ಡಿ ಕಾರು ಚಾಲಕ ಹುಸೇನ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ನಗರ ಸಂಚಾರಿ ಠಾಣೆಯ ಪೊಲೀಸರು ಮೂರು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಜನಾರ್ದನ ರೆಡ್ಡಿ, ‘ರಾಜಕೀಯವಾಗಿ ಸಿದ್ದರಾಮಯ್ಯ ಏನೇ ಇದ್ದರೂ, ತೊಂದರೆ ಕೊಟ್ಟರೂ, ಸಿದ್ದರಾಮಯ್ಯ ಅಲ್ಲದೇ ಹೋದರೂ ಸಿಎಂ‌ ಎಂದು ಮರ್ಯಾದೆ ಕೊಡುತ್ತೇನೆ. ನಾನು ಅಂದು ಗಂಗಾವತಿಗೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋಗಿದ್ದೆ. ಬಳ್ಳಾರಿಯಲ್ಲಿ ಮನೆಯಲ್ಲಿ ಹೋಮ‌ ನಡೆಯುತ್ತಿತ್ತು. ಪೂರ್ಣಾಹುತಿಗೆ ಬರಬೇಕು ಎಂದು ಹೇಳಿದ್ದರು. ಹಾಗಾಗಿ ಮನೆಗೆ ಹೊರಟಿದ್ದೆ. ಕಾರಿನಲ್ಲಿ ಸಿಸಿ ಕ್ಯಾಮೆರಾ ಇದೆ, ದೃಶ್ಯಾವಳಿ ಕೊಡುತ್ತೇನೆ. ಅರ್ಧ ಗಂಟೆ ಕಾಲ ಕಾದರೂ ಕಾನ್ವೇ ಬರಲಿಲ್ಲ. ನಾನು ಪೊಲೀಸರಿಗೆ ಹೇಳಿ ಹೋಗಬಹುದಿತ್ತು. ನನ್ನ ಮುಂದೆ ಇರುವ ವಾಹನ ಬಿಟ್ಟರೆ ಅವರಿಗೆ ಸಮಸ್ಯೆ ಆಗುತ್ತದೆ ಎಂದು ಸಿಎಂ ಬರುವ ಮೊದಲು ಹೋಗಬೇಕು ಎಂದು ಡಿವೈಡರ್ ಮೇಲೆ ಹೋದೆ. ಅಷ್ಟು ಮೂರ್ಖತನ ನನಗಿಲ್ಲ ಎಂದರು.
ಕಾನೂನಿನ ಮೂಲಕ ಕೇಸ್ ಎದುರಿಸುತ್ತೇನೆ.

ಜೊತೆಗೆ ಇಂದು ಮದ ಎನ್ನುವುದು ಶಿವರಾಜ್ ತಂಗಡಗಿಗೆ ಬಹಳಷ್ಟು ಹೆಚ್ಚಿದೆ. ಮುಂದಿನ ದಿನಗಳಲ್ಲಿ ಜನ ಅವರಿಗೆ ಬುದ್ದಿ ಕಲಿಸುತ್ತಾರೆ. ಮುಂದೆ ಅವರಿಗೆ ಡೆಪಾಸಿಟ್ ಕೂಡ ಸಿಗಲ್ಲ. ಇನ್ನು ನಾನು ಡಿವೈಡರ್ ಮೂಲಕ ಹೋಗಿದ್ದೆ. ಆದರೆ, ಡ್ರೈವರ್ ಮೇಲೆ‌ ಎಫ್ ಐಆರ್ ಆಗಿದೆ. ನಾನು ಕಾನೂನಿನ ಮೂಲಕ ಕೇಸ್ ಎದುರಿಸಲಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಘಟನೆ ವಿವರ

ಇದೇ ಅ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಪ್ಪಳ ಜಿಲ್ಲೆಯ ಗಂಗಾವತಿ ಮಾರ್ಗವಾಗಿ ರಾಯಚೂರಿನಿಂದ ಜಿಂದಾಲ್ ಏರ್​ಪೋರ್ಟ್​ಗೆ ತೆರಳುತ್ತಿದ್ದರು. ಈ ವೇಳೆ ರೆಡ್ಡಿ ಕಾರು ಚಾಲಕ ಸಿಎಂ ಕಾನ್ವೆಗೆ ಎದುರಾಗಿ ಚಾಲನೆ ಮಾಡಿದ್ದ. ರೂಲ್ಸ್ ಬ್ರೇಕ್ ಹಿನ್ನೆಲೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಬಳಸುವ ರೇಂಜ್ ರೋವರ್, ಸ್ಕಾರ್ಪಿಯೊ ಹಾಗೂ ಫಾರ್ಚೂನರ್ ಸೇರಿ ಮೂರು ಕಾರಗಳ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದರು. ಅದರಂತೆ ಇಂದು ಬೆಂಗಳೂರಿನಲ್ಲಿ ಸೀಜ್​ ಮಾಡಲಾಗಿದೆ.

ಅಂದು ಸಿಎಂ ಸಂಚಾರ ಹಿನ್ನಲೆ ಗಂಗಾವತಿಯಲ್ಲಿ 20ಕ್ಕೂ ಹೆಚ್ಚು ನಿಮಿಷಗಳ ಕಾಲ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ವೇಳೆ ಗಂಗಾವತಿ ನಗರದ ಸಿಬಿಎಸ್ ಸರ್ಕಲ್​ನಲ್ಲಿ ಶಾಸಕ ಜನಾರ್ದನ ರೆಡ್ಡಿ ಕೂಡ ಸಿಲುಕ್ಕಿದ್ದರು. ಬಹಳ ಸಮಯವಾದರೂ ವಾಹನ ಸಂಚಾರಕ್ಕೆ ಅವಕಾಶ ನೀಡದ ಹಿನ್ನಲೆ ರೋಡ್​ನ ಡಿವೈಡರ್ ಮೂಲಕ ಜನಾರ್ದನ್​ ರೆಡ್ಡಿ ಕಾರು ಚಾಲಕ, ಕಾನ್ವೇ ವಿರುದ್ದ ದಿಕ್ಕಿನಲ್ಲಿ ಕಾರು ಚಲಾಯಿಸಿಕೊಂಡು ಹೋಗಿದ್ದರು. ಬಳಿಕ ರೆಡ್ಡಿ ಕಾರು ಚಾಲಕ ರೂಲ್ಸ್ ಬ್ರೇಕ್​ ಹಿನ್ನಲೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.

RELATED ARTICLES
- Advertisment -
Google search engine

Most Popular