Saturday, May 9, 2026
Google search engine

Homeವಿದೇಶರಷ್ಯಾ-ಉಕ್ರೇನ್ ನಡುವೆ 3 ದಿನಗಳ ಕದನ ವಿರಾಮ : ಡೊನಾಲ್ಡ್ ಟ್ರಂಪ್ ಘೋಷಣೆ

ರಷ್ಯಾ-ಉಕ್ರೇನ್ ನಡುವೆ 3 ದಿನಗಳ ಕದನ ವಿರಾಮ : ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್‌ : ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ ಮೂರು ದಿನಗಳ ಕಾಲ ಯುದ್ಧ ವಿರಾಮಕ್ಕೆ ಒಪ್ಪಂದವಾಗಿದೆ ಎಂದು ಘೋಷಿಸಿದ್ದಾರೆ. ಸುದೀರ್ಘ ಕಾಲದಿಂದ ನಡೆಯುತ್ತಿರುವ ಈ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಅವರು ಬಣ್ಣಿಸಿದ್ದಾರೆ.

ರಷ್ಯಾ ಮತ್ತು ಉಕ್ರೇನ್ ನಡುವೆ ಮೇ 9, 10 ಮತ್ತು 11 ರಂದು ಮೂರು ದಿನಗಳ ಕಾಲ ಯುದ್ಧ ವಿರಾಮ ಇರಲಿದೆ. ರಷ್ಯಾದಲ್ಲಿ ಆಚರಿಸಲಾಗುವ ‘ವಿಕ್ಟರಿ ಡೇ’ (ವಿಜಯೋತ್ಸವ ದಿನ) ಸಂದರ್ಭದಲ್ಲಿ ಈ ಕದನ ವಿರಾಮ ಜಾರಿಯಲ್ಲಿರುತ್ತದೆ. ಎರಡನೇ ಮಹಾಯುದ್ಧದಲ್ಲಿ ಉಕ್ರೇನ್ ಕೂಡ ದೊಡ್ಡ ಪಾತ್ರ ವಹಿಸಿತ್ತು, ಆದ್ದರಿಂದ ಈ ದಿನ ಅವರಿಗೂ ಮುಖ್ಯ ಎಂದು ಟ್ರಂಪ್ ಹೇಳಿದ್ದಾರೆ.
ಈ ಒಪ್ಪಂದದ ಭಾಗವಾಗಿ ಉಭಯ ದೇಶಗಳು ತಲಾ 1,000 ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿವೆ. ಈ ಮೂರು ದಿನಗಳ ಅವಧಿಯಲ್ಲಿ ಎಲ್ಲಾ ರೀತಿಯ ದಾಳಿಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ.

ತಮ್ಮ ಅಧಿಕೃತ ಹೇಳಿಕೆಯಲ್ಲಿ ಟ್ರಂಪ್ “ಈ ಉಪಕ್ರಮಕ್ಕೆ ನಾನೇ ನೇರವಾಗಿ ವಿನಂತಿ ಮಾಡಿದ್ದೆ. ಈ ಒಪ್ಪಂದದ ಷರತ್ತುಗಳಿಗೆ ಒಪ್ಪಿಗೆ ನೀಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ನಿರ್ಧಾರವನ್ನು ನಾನು ಪ್ರಶಂಸಿಸುತ್ತೇನೆ. ಇದು ವಿನಾಶಕಾರಿ ಯುದ್ಧದ ಅಂತ್ಯಕ್ಕೆ ನಾಂದಿಯಾಗಲಿದೆ ಎಂದು ನಾನು ಭಾವಿಸುತ್ತೇನೆ” ದ್ವಿತೀಯ ಮಹಾಯುದ್ಧದ ನಂತರದ ಈ ಅತಿ ದೊಡ್ಡ ಸಂಘರ್ಷವನ್ನು ಕೊನೆಗೊಳಿಸಲು ಮಾತುಕತೆಗಳು ಮುಂದುವರಿಯುತ್ತಿವೆ ಮತ್ತು ನಾವು ಪರಿಹಾರದ ಹತ್ತಿರದಲ್ಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಷ್ಯಾದಲ್ಲಿ ಪ್ರತಿ ವರ್ಷ ಮೇ 9 ರಂದು ‘ವಿಕ್ಟರಿ ಡೇ’ ಆಚರಿಸಲಾಗುತ್ತದೆ. ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಒಕ್ಕೂಟ ಸಾಧಿಸಿದ ವಿಜಯದ ಸ್ಮರಣಾರ್ಥ ಈ ದಿನವನ್ನು ಆಚರಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಕ್ರೇನ್ ಸೋವಿಯತ್ ಸಂಕೇತಗಳಿಂದ ದೂರವಿದ್ದರೂ, ಯುದ್ಧದ ಆ ಇತಿಹಾಸದಲ್ಲಿ ಉಕ್ರೇನಿಯನ್ನರ ತ್ಯಾಗವೂ ಅಡಗಿದೆ ಎಂದು ಟ್ರಂಪ್ ನೆನಪಿಸಿದ್ದಾರೆ.

ಈ ಕದನ ವಿರಾಮವು ಸಂಪೂರ್ಣವಾಗಿ ಜಾರಿಗೆ ಬಂದರೆ, ಯುದ್ಧ ಆರಂಭವಾದ ನಂತರ ಕಂಡುಬಂದ ಅತಿ ದೊಡ್ಡ ವಿರಾಮಗಳಲ್ಲಿ ಒಂದಾಗಲಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular