ದಾವಣಗೆರೆ : ಹಿಮೋಫಿಲಿಯಾ ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಜ್ಯ ಸರ್ಕಾರದಿಂದ ಮಹತ್ವದ ನೆರವು ಲಭ್ಯವಾಗಿದೆ. ಸುಮಾರು 57 ಸಾವಿರ ರೂ. ಮೌಲ್ಯದ ಎಮಿಸಿಜುಮ್ಯಾಬ್ (ಹೆಮ್ಲಿಬ್ರಾ) ಎಂಬ ಇಂಜೆಕ್ಷನ್ ಅನ್ನು ಇದೀಗ ಉಚಿತವಾಗಿ ನೀಡಲಾಗುತ್ತಿದೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಈ ಯೋಜನೆಗೆ ಚಾಲನೆ ನೀಡಿದರು. ರಕ್ತ ಹೆಪ್ಪುಗಟ್ಟದ ಸಮಸ್ಯೆಯಿಂದ ಗಾಯವಾದಾಗ ಮಾತ್ರ ಚಿಕಿತ್ಸೆ ನೀಡುತ್ತಿದ್ದ ಹಿಂದಿನ ವ್ಯವಸ್ಥೆಗೆ ಬದಲಾಗಿ, ಇದೀಗ ಗಾಯವಾಗುವ ಮೊದಲೇ ತಿಂಗಳಿಗೆ ಒಮ್ಮೆ ಈ ಇಂಜೆಕ್ಷನ್ ನೀಡಲಾಗುತ್ತದೆ. ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಸುಧಾರಿಸಿ ಅನಾವಶ್ಯಕ ರಕ್ತಸ್ರಾವವನ್ನು ತಡೆಯಲು ಸಹಾಯ ಮಾಡುತ್ತದೆ.
ಹಿಮೋಫಿಲಿಯಾ ರೋಗಿಗಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವಲ್ಲಿ ಈ ಕ್ರಮ ಮಹತ್ವದ್ದಾಗಿದೆ. ಹಲವು ವರ್ಷಗಳ ಹೋರಾಟದ ನಂತರ ಸರ್ಕಾರದ ಈ ನಿರ್ಧಾರಕ್ಕೆ ರೋಗಿಗಳು ಹಾಗೂ ಅವರ ಕುಟುಂಬಸ್ಥರು ಭಾವುಕರಾಗಿ ಸಂತಸ ವ್ಯಕ್ತಪಡಿಸಿದ್ದಾರೆ.



