ಮೈಸೂರು : ಎಲ್ಲಾ ಧರ್ಮಗಳೂ ಪ್ರೀತಿಯನ್ನೇ ಬೋಧಿಸುತ್ತವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮೈಸೂರು ತಾಲೂಕು ವರಕೋಡು ಗ್ರಾಮದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಸಂಪ್ರೊಕ್ಷಣ ಪುನರ್ ಪ್ರತಿಷ್ಠಾಪನಾ ಕುಂಭಾಭಿಷೇಕ ಹಾಗೂ ಮಹಾದ್ವಾರ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಕ್ತಿ ಪರಿಶುದ್ಧವಾಗಿರಬೇಕು. ಅಲ್ಲದೆ, ಮಾನವೀಯತೆ ಹಾಗೂ ಪರರ ಹಿತಚಿಂತನೆಯಿಂದ ಮಾತ್ರ ದೇವರು ಒಲಿಯುತ್ತಾನೆ. ದೇವರು ಸರ್ವಾಂತರ್ಯಾಮಿಯಾಗಿದ್ದಾನೆ ಎಂದು ತಳಿಸಿದರು.
ಬೀರೇಶ್ವರಸ್ವಾಮಿ ದೇವಸ್ಥಾನದ ಪೂಜಾ ಮಹೋತ್ಸವಗಳು, ಜಾತ್ರೆಗಳಲ್ಲಿ ಜನರು ಸಂತೋಷದಿಂದ ಭಾಗವಹಿಸಿ, ಬೀರೇಶ್ವರಸ್ವಾಮಿ ನಾಡಿನ ಸಮಸ್ತ ಜನತೆಗೆ ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಅಲ್ಲದೆ ಭಕ್ತಿಯು ಪರಿಶುದ್ಧವಾಗಿರಬೇಕು. ಯಾವ ಧರ್ಮವೂ ದ್ವೇಷ ಮಾಡುವುದನ್ನು ಭೋದಿಸಿಲ್ಲ. ಇನ್ನೊಬ್ಬರನ್ನು ದ್ವೇಷಿಸುವುದು ಭಕ್ತಿಯೇ ಅಲ್ಲ. ಶುದ್ಧವಾದ ಭಕ್ತಿ ಇಲ್ಲದೆ ಹೋದರೆ ಎಷ್ಟೇ ಪೂಜೆ ಮಾಡಿದರೂ ಸಾರ್ಥಕ ಆಗುವುದಿಲ್ಲ. ದೇವನೊಬ್ಬ, ನಾಮ ಹಲವು. ದೇವರು ಗುಡಿಯಲ್ಲಿ ಮಾತ್ರ ಇರುತ್ತಾನೆ ಎಂದು ನಂಬುವುದು ಸರಿಯಾದ ನಂಬಿಕೆಯಲ್ಲ. ಶುದ್ಧವಾದ ಭಕ್ತಿಯಿಂದ ಪೂಜಿಸುವವರಿಗೆ ದೇವರು ಒಳ್ಳೆಯದನ್ನು ಮಾಡುತ್ತಾನೆ. ದೇವರು ನಿಮ್ಮಲ್ಲೇ ಇದ್ದಾನೆ. ದೇವರು ನಿಮಗೆ ಒಲಿಯಬೇಕೆಂದರೆ ಯಾರಿಗೂ ಕೆಟ್ಟದನ್ನು ಬಯಸಬಾರದು ಎಂದು ತಿಳಿಸಿದರು.



