ಅಬುಧಾಬಿ: ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಮಾಹಿತಿ ಮತ್ತು ಪ್ರಚೋದನಾತ್ಮಕ ಸುದ್ದಿಗಳನ್ನು ಹರಡಿದ ಆರೋಪದ ಮೇಲೆ 19 ಭಾರತೀಯರು ಸೇರಿ ಒಟ್ಟು 35 ಮಂದಿಯನ್ನು ಬಂಧಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಪ್ರಾದೇಶಿಕ ಉದ್ವಿಗ್ನತೆಯ ನಡುವೆ ಜನರಲ್ಲಿ ಆತಂಕ ಉಂಟುಮಾಡುವ ರೀತಿಯ ದೃಶ್ಯಾವಳಿಗಳು ಮತ್ತು ತಪ್ಪು ನಿರೂಪಣೆಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೂಲಕ ಹಂಚಿಕೊಂಡಿದ್ದಾರೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಯುಎಇ ಅಟಾರ್ನಿ ಜನರಲ್ ಡಾ. ಹಮದ್ ಸೈಫ್ ಅಲ್ ಶಮ್ಸ್ ಅವರ ಪ್ರಕಾರ, ಆರೋಪಿಗಳು ಜನರನ್ನು ದಾರಿತಪ್ಪಿಸುವ ಹಾಗೂ ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯನ್ನು ಹರಡಿದ್ದಾರೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳ ಮೇಲೆ ಕಟ್ಟುನಿಟ್ಟಿನ ಮೇಲ್ವಿಚಾರಣೆ ನಡೆಸಿದ ಪರಿಣಾಮ ಈ ಪ್ರಕರಣ ಪತ್ತೆಯಾಗಿದೆ. ಆರೋಪಿಗಳನ್ನು ಮೂರು ವಿಭಿನ್ನ ಗುಂಪುಗಳಾಗಿ ಗುರುತಿಸಲಾಗಿದೆ.
ಮೊದಲ ಗುಂಪಿನಲ್ಲಿ ಐವರು ಭಾರತೀಯರು, ಒಬ್ಬ ಪಾಕಿಸ್ತಾನಿ, ಒಬ್ಬ ನೇಪಾಳಿ, ಇಬ್ಬರು ಫಿಲಿಪಿನೋಗಳು ಹಾಗೂ ಒಬ್ಬ ಈಜಿಪ್ಟ್ ನಾಗರಿಕರಿದ್ದಾರೆ. ಎರಡನೇ ಗುಂಪಿನಲ್ಲಿ ಐವರು ಭಾರತೀಯರು ಮತ್ತು ನೇಪಾಳ ಹಾಗೂ ಬಾಂಗ್ಲಾದೇಶದ ತಲಾ ಇಬ್ಬರು ಸೇರಿದ್ದಾರೆ. ಮೂರನೇ ಗುಂಪಿನಲ್ಲಿ ಐವರು ಭಾರತೀಯರು ಮತ್ತು ಒಬ್ಬ ಪಾಕಿಸ್ತಾನಿ ಇದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಭಾರತೀಯರು ಕೂಡ ಆರೋಪಗಳನ್ನು ಎದುರಿಸುತ್ತಿದ್ದಾರೆ.
ಶನಿವಾರ 10 ಆರೋಪಿಗಳ ವಿಚಾರಣೆ ನಡೆಸಿ ಸಾರ್ವಜನಿಕ ವಿಚಾರಣೆಯನ್ನು ಆರಂಭಿಸಲಾಗಿದೆ. ಕೃತಕ ಬುದ್ಧಿಮತ್ತೆ (AI) ಬಳಸಿ ಸ್ಫೋಟಗಳು ಹಾಗೂ ಕಟ್ಟಡಗಳ ಮೇಲೆ ದಾಳಿಗಳನ್ನು ತೋರಿಸುವ ನಕಲಿ ದೃಶ್ಯಗಳನ್ನು ಹರಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುಎಇ ಕಾನೂನಿನ ಪ್ರಕಾರ ಇಂತಹ ಅಪರಾಧಗಳಿಗೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಕನಿಷ್ಠ 1,00,000 ದಿರ್ಹಮ್ ದಂಡ ವಿಧಿಸಲಾಗುತ್ತದೆ.



