ಲಿಂಗಾನುಪಾತ ಹದಗೆಡಲು ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗು ಮುಖ್ಯವಾಗಿ ಕಾರಣವಾಗುತ್ತಿದ್ದು, ಈ ಪಿಡುಗನ್ನು ಹೋಗಲಾಡಿಸಬೇಕು. ಸಮಾಜದಲ್ಲಿ ಗಂಡು ಶ್ರೇಷ್ಠ, ಹೆಣ್ಣು ತಾತ್ಸಾರ ಎಂಬ ಭೇದ ತೋರದೆ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂದು ವೆನ್‍ಲಾಕ್ ಅಧೀಕ್ಷಕ ಡಾ.ಶಿವಪ್ರಕಾಶ್ ಹೇಳಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹೆಣ್ಣು ಮಗು ಹುಟ್ಟಿದರೆ ಶಿಕ್ಷಣ, ವರದಕ್ಷಿಣೆ ಹಾಗೂ ವಿವಾಹ ವೆಚ್ಚ ಭರಿಸಬೇಕಾಗುತ್ತದೆ ಎಂಬ ಕಾರಣದಿಂದ ಕುಟುಂಬಕ್ಕೆ ಹೊರೆ ಎಂದು ಭಾವಿಸಿಕೊಂಡ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕು. ಹೆಣ್ಣಿನ ಮೇಲಿರುವ ತಾತ್ಸಾರ ಭಾವನೆಯನ್ನು ದೂರಮಾಡÀಬೇಕು ಎಂದು ಅವರು ಹೇಳಿದರು. ಬಾಲ್ಯ ವಿವಾಹ ಪದ್ಧತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿ ಹೆಣ್ಣು ಗರ್ಭಿಣಿಯಾಗಿ ಹೆರಿಗೆ ಸಂದರ್ಭದಲ್ಲಿ ಸಾವಿಗೀಡಾಗುವ ಸಾಧ್ಯತೆಗಳಿಂದ ಹಾಗೂ ಹೆಣ್ಣು ಮಕ್ಕಳಿಗಿರುವ ಕಡಿಮೆ ಸಾಮಾಜಿಕ ಸ್ಥಾನಮಾನದಿಂದ, ಗಂಡು ಮಗು ಬೇಕೆನ್ನುವ ಹಂಬಲ ಹಾಗೂ ಮೂಢನಂಬಿಕೆಗಳಿಂದ ವೈದ್ಯಕೀಯ ತಂತ್ರಜ್ಞಾನಗಳ ಮೂಲಕ ಭ್ರೂಣ ಲಿಂಗ ಪತ್ತೆ ಹಚ್ಚಿ ಹೆಣ್ಣು ಶಿಶುಗಳ ಹತ್ಯೆ ಮಾಡುವುದರಿಂದ ಮಹಿಳೆಯರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಹೇಳಿದರು.



