ಬೆಂಗಳೂರು: ಮಾಜಿ ಬಿಗ್ ಬಾಸ್ ಸ್ಪರ್ಧಿ, ಜನಪ್ರಿಯ ನಿರೂಪಕಿ, ನಟಿ ಅನುಪಮಾ ಗೌಡ ಅವರು ಇದೀಗ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ಅನುಪಮಾ ತಮ್ಮದಲ್ಲದ ಎಂಗೇಜ್‌ಮೆಂಟ್ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ.
ಆಗಿದ್ದಿಷ್ಟೇ, ಗಿಚ್ಚಿ ಗಿಲಿಗಿಲಿ ಜೂನಿಯರ್ಸ್ ಕಾರ್ಯಕ್ರಮದ ನಿರೂಪಣೆ ಮಾಡುತ್ತಿರುವ ಅನುಪಮಾ ಇತ್ತೀಚೆಗೆ ತಮ್ಮ 35ನೇ ಬರ್ತ್ ಡೇ ಆಚರಿಸಿಕೊಂಡಿದ್ದರು. ಈ ವೇಳೆ ಅವರ ಫೋಟೋಗ್ರಾಫರ್ ಗೆಳೆಯರೊಬ್ಬರು ಇಬ್ಬರು ಒಟ್ಟಿಗೆ ಇರುವ ಫೋಟೊಗಳನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಹಲವರು ಅನುಪಮಾ ನಿಶ್ಚಿತಾರ್ಥ ನಡೆದಿದೆ ಎಂದು ಪೋಸ್ಟ್ ಮಾಡಿದ್ದರು. ಅದು ಅನುಪಮಾ ಅವರ ಗಮನಕ್ಕೂ ಬಂದಿದೆ.
ಈ ವಿಚಾರಕ್ಕೆ ಇದೀಗ ಅನುಪಮಾ ಗೌಡ ಸ್ವತಃ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. “ನನ್ನ ಎಂಗೇಜ್‌ಮೆಂಟ್‌ಗೆ ನನಗೆ ಕರೆದಿರಲಿಲ್ಲ. ಹಾಗಾಗಿ ಬರಲಾಗಲಿಲ್ಲ” ಎಂದಿದ್ದಾರೆ.
“ಕಳೆದ ಎರಡು ದಿನಗಳಿಂದ ಕೆಲವರು ಮೆಸೇಜ್ ಮೂಲಕ ಮತ್ತು ಶೂಟಿಂಗ್ ಬಂದಾಗ್ಲೂ ವಿಶ್ ಮಾಡ್ತಿದ್ದಾರೆ. ನಮ್ಮ ಎಂಗೇಜ್ಮೆಂಟ್ ಅಂತ ನಮಗೂ ಯಾರು ಆಹ್ವಾನ ನೀಡಿರಲಿಲ್ಲ. ಹಾಗಾಗಿ ನಮಗೂ ಅಟೆಂಡ್ ಮಾಡೋದಕ್ಕೆ ಆಗಲಿಲ್ಲ. ನಮ್ಮ ಬರ್ತ್ ಡೇಗೆ ಹಾಕಿದ ಫೋಟೋಗಳನ್ನು ಬಳಸಿ, ಮದುವೆ-ನಿಶ್ಚಿತಾರ್ಥ ಅಂತ ಶೇರ್ ಮಾಡ್ತಿದ್ದಾರೆ. ಅನುಶ್ರೀ ಮದುವೆ ಆಯ್ತು, ಇದೀಗ ಅನುಪಮಾ ಗೌಡ ನಿಶ್ಚಿತಾರ್ಥ ಎಂದು ಹೇಳ್ತಿದ್ದಾರೆ. ಇದು AI ಕಾಲ, ಉಂಗುರ ಬದಲಿಸುವ ರೀತಿಯಲ್ಲಾದ್ರೂ ಫೋಟೋ ಎಡಿಟ್ ಮಾಡಿ ಹಾಕಬಹುದಿತ್ತು. ಆದರೆ ಹಾಗೇನೂ ಮಾಡದಿರೋದಕ್ಕೆ ಬೇಸರವಾಗ್ತಿದೆ” ಎಂದು ಅನುಪಮಾ ಟ್ರೋಲಿಗರ ಟೀಕೆ ಮಾಡಿದ್ದಾರೆ.
“ಎರಡು ದಿನದ ಹಿಂದೆ ಎಂಗೇಜ್‌ಮೆಂಟ್ ಆಗಿದೆ. ಇಮಿಡಿಯೇಟ್ ಮದುವೆ ಮಾಡಿಸೋದಕ್ಕೆ ಹೋಗಬೇಡಿ. ಯಾಕೆಂದರೆ, ಸ್ವಲ್ಪ ಡೌಟ್ ಆಗುತ್ತೆ. ಒಂದಷ್ಟು ಲೈಕ್, ಕಾಮೆಂಟ್ ಎಲ್ಲಾ ನಿಮಗೆ ಸಿಕ್ಕಿರುತ್ತೆ. ಇಮಿಡಿಯೇಟ್ ಆಗಿ ಪೋಸ್ಟ್ ಮಾಡಿದ್ರೆ, ಅದು ಚೆನ್ನಾಗಿ ಅನಿಸಲ್ಲ. ಒಂದೆರಡು ತಿಂಗಳು ಬಿಟ್ಟು ಪೋಸ್ಟ್ ಮಾಡಿ. ಮತ್ತೆ ನಿಮಗೆ ಒಳ್ಳೆಯ ಟ್ರಾಕ್ಷನ್ ಸಿಗುತ್ತೆ. ಜನ ಎಲ್ಲಾ ನೋಡ್ತಾರೆ. ಶೇರ್ಸ್ ಆಗುತ್ತೆ” ಎಂದು ಕಾಲೆಳೆದಿದ್ದಾರೆ.



