Monday, June 22, 2026
Google search engine

Homeರಾಜಕೀಯಬಿಡದಿ ಯೋಜನೆ ವಿವಾದ : ಬಹಿರಂಗ ಚರ್ಚೆಗೆ ಡಿಕೆಶಿ ಸಿದ್ಧ : ಜೂನ್ 26ಕ್ಕೆ ಕುಮಾರಸ್ವಾಮಿಗೆ...

ಬಿಡದಿ ಯೋಜನೆ ವಿವಾದ : ಬಹಿರಂಗ ಚರ್ಚೆಗೆ ಡಿಕೆಶಿ ಸಿದ್ಧ : ಜೂನ್ 26ಕ್ಕೆ ಕುಮಾರಸ್ವಾಮಿಗೆ ಆಹ್ವಾನ

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಬಿಡದಿ ಟೌನ್‌ಶಿಪ್ ಯೋಜನೆ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಈ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮಾಡಿದ್ದ ಆರೋಪಗಳು ಮತ್ತು ಸವಾಲಿನ ಬೆನ್ನಲ್ಲೇ ಡಿಕೆ ಶಿವಕುಮಾರ್ ಬಹಿರಂಗ ಚರ್ಚೆಗೆ ಸಿದ್ಧ ಎಂದು ಘೋಷಿಸಿದ್ದಾರೆ.

ಈ ಸಂಬಂಧ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಡಿಕೆ ಶಿವಕುಮಾರ್, ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಸಮಗ್ರ ಚರ್ಚೆ ನಡೆಸಲು ಆಹ್ವಾನ ನೀಡಿದ್ದಾರೆ. ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ತಾವು ಹಾಗೂ ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ಆಗಮಿಸುವಂತೆ ಅವರು ಕೋರಿದ್ದಾರೆ.

ಪತ್ರದಲ್ಲಿ, “ತಾವು ಪ್ರಾರಂಭಿಸಿದ ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ತಮ್ಮೊಂದಿಗೆ ಚರ್ಚಿಸಲು ನಾನು ಉತ್ಸುಕನಾಗಿದ್ದೇನೆ. ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ವಿಧಾನಸೌಧದಲ್ಲಿರುವ ನನ್ನ ಕಚೇರಿಗೆ ತಮ್ಮ ತಂಡದ ಐದು ಪ್ರತಿನಿಧಿಗಳೊಂದಿಗೆ ಆಗಮಿಸಿ,” ಎಂದು ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ.

ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಹಲವು ಪ್ರಶ್ನೆಗಳನ್ನು ಎತ್ತಿದ್ದರು. ಯೋಜನೆಯ ಭೂಸ್ವಾಧೀನ, ಅನುಮೋದನೆ, ಆಡಳಿತಾತ್ಮಕ ನಿರ್ಧಾರಗಳು ಹಾಗೂ ರಾಜಕೀಯ ಹಸ್ತಕ್ಷೇಪದ ಕುರಿತು ಅವರು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ಅಲ್ಲದೆ, ಈ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಸಿದ್ಧವೇ ಎಂದು ಡಿಕೆ ಶಿವಕುಮಾರ್ ಅವರಿಗೆ ಸವಾಲು ಹಾಕಿದ್ದರು.

ಈ ಸವಾಲಿಗೆ ಪ್ರತಿಕ್ರಿಯಿಸಿರುವ ಡಿಕೆ ಶಿವಕುಮಾರ್ ಇದೀಗ ಅಧಿಕೃತ ಆಹ್ವಾನ ನೀಡಿರುವುದರಿಂದ, ಜೂನ್ 26ರಂದು ನಡೆಯಲಿರುವ ಚರ್ಚೆ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಇಬ್ಬರು ಪ್ರಮುಖ ನಾಯಕರ ನಡುವಿನ ಈ ಮುಖಾಮುಖಿ ಚರ್ಚೆಯಲ್ಲಿ ಬಿಡದಿ ಟೌನ್‌ಶಿಪ್ ಯೋಜನೆಯ ಹಲವು ಅಂಶಗಳು ಸಾರ್ವಜನಿಕವಾಗಿ ಬೆಳಕಿಗೆ ಬರುವ ನಿರೀಕ್ಷೆಯಿದೆ.

ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಭಾರೀ ಕುತೂಹಲ ಮೂಡಿಸಿದ್ದು, ಡಿಕೆಶಿ ಆಹ್ವಾನಕ್ಕೆ ಕುಮಾರಸ್ವಾಮಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದು ಇದೀಗ ಗಮನ ಸೆಳೆದಿದೆ. ಜೂನ್ 26ರ ಚರ್ಚೆ ನಡೆಯುತ್ತದೆಯೇ ಅಥವಾ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

RELATED ARTICLES
- Advertisment -
Google search engine

Most Popular