ಚಿಕ್ಕಬಳ್ಳಾಪುರ : ಜ್ಞಾನ, ಕೌಶಲ್ಯ ಸಾಮರ್ಥ್ಯಗಳು ಹಾಗೂ ಪರಿಣಿತಿಯನ್ನು ಶಾಲೆಗಳಲ್ಲಿ ಕಲಿಯಬಹುದು. ಆದರೆ ಕರುಣೆ, ಸಹನೆ ಮತ್ತು ಬದ್ಧತೆಗಳನ್ನು ನಿಸ್ವಾರ್ಥ ಸೇವೆಯ ಮೂಲಕವೇ ಕಟ್ಟಿಕೊಳ್ಳಬೇಕೆಂದು ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಹಾಗೂ ಡೀನ್ ಡಾ.ಎಂ.ಎಲ್.ಮಂಜುನಾಥ್ ರವರು ನರ್ಸಿಂಗ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಹಾಗೂ ಪ್ರಮಾಣವಚನ ಬೋಧನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿನ ಶುಶ್ರೂಷಕ ಸೇವಾ ಕ್ಷೇತ್ರದಲ್ಲಿ ನರ್ಸಿಂಗ್ ಒಂದು ಅಪೂರ್ವ ಸೇವೆಯಾಗಿದ್ದು ಫ್ಲಾರೆನ್ಸ್ ನೈಟಿಂಗೇಲ್ ಅವರ ಸೇವಾಗುಣ ಮತ್ತು ಸ್ಪೂರ್ತಿಯನ್ನು ಶುಶ್ರೂಷಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಮಹತ್ವದ ಕಾರ್ಯದ ಯಶಸ್ವಿಗೆ ದೀಪ ಹೊತ್ತಿಸುವುದು ನಮ್ಮ ಪರಂಪರೆಯ ಪ್ರತೀಕವಾಗಿದೆ. ಈ ದೀಪದ ಪ್ರಕಾಶಮಾನವು ನಿಮ್ಮ ಶುಶ್ರೂಷಕ ವೃತ್ತಿಯ ದಾರಿದೀಪವಾಗಲಿ. ಶುಶ್ರೂಷಕರ ಶ್ವೇತ ಉಡುಪು ಶಾಂತಿ, ಸಹನೆ, ಪ್ರೇಮ, ಸೇವೆ ಹಾಗು ವಿಶ್ವಬಂಧುತ್ವದ ಪ್ರತೀಕವಾಗಿದೆ ಎಂದರು.
ಬಳಿಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ, ಭಾರತದಲ್ಲಿ ಶುಶ್ರೂಷಕ ಸೇವಾ ಪರಂಪರೆ ಅತ್ಯಂತ ಶ್ರೇಷ್ಠ ಹಾಗೂ ವ್ಯಾಪಕ ವಾಗಿ ಬೆಳೆದಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ನರ್ಸಿಂಗ್ ಮೌಲ್ಯಗಳು ಅಗತ್ಯವಾಗಿವೆ.
ಪ್ರಮಾಣವಚನ ಹಾಗೂ ಪದವಿಯ ರಾಂಕುಗಳೇ ಶುಶ್ರೂಷಕ ವೃತ್ತಿಯಲ್ಲಿ ಮುಖ್ಯವಾಗದೇ ಜ್ಞಾನ ಮತ್ತು ಕೌಶಲ್ಯಗಳ ಜೊತೆಗೆ ಸೇವಾ ಭಾವನೆ ಮತ್ತು ಕಾರುಣ್ಯ ಗುಣಗಳು ಸಮನ್ವಯಗೊಳ್ಳಬೇಕು. ಭಾರತೀಯ ನರ್ಸ್ಗಳಿಗೆ ಜಗತ್ತಿನಲ್ಲಿ ದೊಡ್ಡ ಬೇಡಿಕೆ ಇದ್ದು ನೀವು ಪ್ಲಾರೆಂನ್ಸ್ ನೈಟಿಂಗೆಲ್ ಅವರ ಜೀವನ, ಸೇವೆ ಹಾಗೂ ಆದರ್ಶಗಳನ್ನು ಅಳವಡಿಸಿಕೊಂಡು ಬೆಳೆದರೆ ರೋಗಿಗಳ ಆರೈಕೆ, ಚಿಕಿತ್ಸೆಯ ಜೊತೆಗೆ ನಿಮ್ಮ ಜವಾಬ್ದಾರಿ ಹಾಗೂ ಉತ್ತರದಾಯಿ ಗುಣಗಳನ್ನು ಬೆಳೆಸಿಕೊಂಡರೆ. ಆಗ ಮಾತ್ರ ನೀವು ಈ ಕ್ಷೇತ್ರದ ಸಮರ್ಥ ವೃತ್ತಿಪರ ರಾಗುತ್ತೀರಿ ಎಂದು ಕಿವಿಮಾತು ಹೇಳಿದರು.
ಜಿಲ್ಲಾಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಪಿ.ವಿ.ರಮೇಶ್ ಮಾತನಾಡಿ, ಭಾರತದಲ್ಲಿ ಶುಶ್ರೂಷಕ ಸೇವಾ ಪರಂಪರೆ ಅತ್ಯಂತ ಶ್ರೇಷ್ಠ ಹಾಗೂ ವ್ಯಾಪಕವಾಗಿ ಬೆಳೆದಿದ್ದು, ಪ್ರತಿಯೊಬ್ಬ ವ್ಯಕ್ತಿಗೂ ನರ್ಸಿಂಗ್ ಮೌಲ್ಯಗಳು ಅಗತ್ಯವಾಗಿವೆ. ಪ್ರಮಾಣವಚನ ಹಾಗೂ ಪದವಿಯ ರಾಂಕುಗಳೇ ಶುಶ್ರೂಷಕ ವೃತ್ತಿಯಲ್ಲಿ ಮುಖ್ಯವಾಗದೇ ಜ್ಞಾನ ಮತ್ತು ಕೌಶಲ್ಯ ಗಳ ಜೊತೆಗೆ ಸೇವಾ ಭಾವನೆ ಮತ್ತು ಕಾರುಣ್ಯ ಗುಣಗಳು ಸಮನ್ವಯಗೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನರ್ಸಿಂಗ್ ಪ್ರಾಶಂಶುಪಾಲೆ ಶಾಂತಿ, ಮೆಡಿಕಲ್ ಕಾಲೇಜಿನ ನೋಡಲ್ ಅಧಿಕಾರಿ ಡಾ.ರವೀಂದ್ರ. ವಿಭಾಗ ಮುಖ್ಯಸ್ಥರಾದ ಡಾ.ಸುರೇಶ್ ನಾಯಕ್, ಡಾ.ವೆಂಕಟೇಶ ಬಾಬು, ಡಾ.ರಮೇಶ್, ಡಾ.ಆಶಾ, ಡಾ.ರವೀಂದ್ರ, ಸಹಾಯಕ ಪ್ರಾಧ್ಯಾಪಕರಾದ ಡಾ.ನರಸಿಂಹ, ಡಾ.ಶಂಕರಪ್ಪ, ಡಾ.ಪುಷ್ಪ, ಡಾ.ಶಶಿಕುಮಾರ್, ಡಾ.ಅನಿತಾ ಲಕ್ಷ್ಮೀ, ಡಾ.ಸಂದೀಪ್, ನರ್ಸಿಂಗ್ ಸಿಬ್ಬಂಧಿ ಪದ್ಮಾವತಮ್ಮ, ಸೈಯದ್ ಸಮೀವುಲ್ಲಾ, ವಿಜಯಲಕ್ಷ್ಮಿ, ವಿಶಾಲಾಕ್ಷಿ, ವಿಶ್ರಾಂತಮ್ಮ, ಬೋಧಕ, ಬೋಧಕೇತರ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಇದ್ದರು.



