ಹುಬ್ಬಳ್ಳಿ : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ವಿಷಯಕ್ಕೆ ಅಂಕ ತೆಗೆದು ಗ್ರೇಡಿಂಗ್ ನೀಡುವ ನಿರ್ಣಯ ಕೈಗೊಂಡಿರುವ ರಾಜ್ಯ ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲ. ಈ ನೀತಿ ಕೈಬಿಟ್ಟು ಮೊದಲಿನ ಪದ್ಧತಿಯನ್ನೇ ಮುಂದುವರಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಸೇರಿ ತೃತೀಯ ಭಾಷೆಗೆ ಗ್ರೇಡ್ ನೀಡುವ ಶಿಕ್ಷಣ ಇಲಾಖೆಯ ದಿಢೀರ್ ನಿರ್ಧಾರ ಖಂಡನಾರ್ಹ. ಹಿಂದಿ ಭಾಷೆ ಅಲ್ಲದೇ ಕೆಲವೆಡೆ ತೃತೀಯ ಭಾಷೆಯಾಗಿ ಕನ್ನಡ, ಸಂಸ್ಕೃತ, ಉರ್ದು, ಇಂಗ್ಲಿಷ್, ಮರಾಠಿ ಭಾಷೆಗಳಿವೆ. ಈ ನೀತಿಯಿಂದಾಗಿ ಈ ಎಲ್ಲ ಭಾಷೆಗಳಿಗೂ ಹೊಡೆತ ಬೀಳಲಿದೆ. ಈಗಾಗಲೇ ಶಿಕ್ಷಕರು ಒಂದು ವರ್ಷ ಮಕ್ಕಳಿಗೆ ಹಿಂದಿ ವಿಷಯದಲ್ಲಿ ಪಾಠ ಮಾಡಿದ್ದಾರೆ. ಈಗ ಮಕ್ಕಳ ಪರೀಕ್ಷಾ ಸಮಯದಲ್ಲೇ ತರಾತುರಿಯಲ್ಲಿ ತಜ್ಞರೊಂದಿಗೆ ಚರ್ಚಿಸದೇ ಈ ನಿರ್ಧಾರ ತಗೆದುಕೊಂಡರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಕಲಿಕೆಯ ವಿಷಯದಲ್ಲಿ ದ್ವಿಭಾಷಾ ನೀತಿ ಸರಿಯಲ್ಲ. ಆಡಳಿತ ಭಾಷೆ ಮಾಡುವಂತೆ ನಾನು ಒತ್ತಾಯಿಸುವುದಿಲ್ಲ. ಆದರೆ, ಶಾಲಾ-ಕಾಲೇಜುಗಳಲ್ಲಿ ಕಲಿಯುವ ವಿಷಯದಲ್ಲಿ ಬದಲಾವಣೆ ಮಾಡುವುದು ಸರಿಯಲ್ಲ. ಈಗ ಹಿಂದಿ ಭಾಷೆಗೆ ಅಂಕ ತೆಗೆದು ಗ್ರೇಡ್ ನೀಡಿದ್ದಾರೆ. ಮುಂದೆ ಎಲ್ಲ ಭಾಷೆಗಳಿಗೂ ಗ್ರೇಡ್ ಕೇಳುತ್ತಾರೆ. ನೀಡಲು ಆಗುತ್ತದೆಯೇ ಎಂದು ಹೊರಟ್ಟಿ ಪ್ರಶ್ನಿಸಿದರು.
1960ರಿಂದ ಬಂದ ಪದ್ಧತಿ ಬದಲಿಸುತ್ತಿರುವುದು ಸರಿಯಲ್ಲ. ಬೇರೆ ರಾಜ್ಯಗಳಲ್ಲಿ ಇಂಗ್ಲಿಷ್ ಹೊರತುಪಡಿಸಿದರೆ ಹಿಂದಿ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ. ಹಾಗಾಗಿ ಈ ನಿರ್ಣಯ ಕೈಬಿಟ್ಟು ಮೊದಲಿನ ಪದ್ಧತಿ ಮುಂದುವರಿಸಿಕೊಂಡು ಹೋಗುವಂತೆ ಮುಖ್ಯಮಂತ್ರಿಗೆ ಒತ್ತಾಯಿಸುವೆ. ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಕಾರ್ಯದರ್ಶಿಗಳೊಂದಿಗೆ ಮಾತನಾಡಿರುವೆ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೊರಟ್ಟಿ ತಿಳಿಸಿದರು.



