ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಾಗೂ ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಯ ಮಾಲೀಕತ್ವದಲ್ಲಿ ಮಹತ್ವದ ಬದಲಾವಣೆಯಾಗಿದೆ. ಈ ಹಿಂದೆ ಬ್ರಿಟನ್ ಮೂಲದ ಡಿಯಾಜಿಯೋ ಸಂಸ್ಥೆಯ ಭಾರತೀಯ ಘಟಕ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಒಡೆತನದಲ್ಲಿದ್ದ ಆರ್ಸಿಬಿ ಫ್ರಾಂಚೈಸಿಯ ಮಾರಾಟ ಪ್ರಕ್ರಿಯೆ ಇದೀಗ ಪೂರ್ಣಗೊಂಡಿದ್ದು, ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಈ ವ್ಯವಹಾರಕ್ಕೆ ಅಧಿಕೃತ ಅನುಮೋದನೆ ನೀಡಿದೆ. ಒಟ್ಟು ₹16,660 ಕೋಟಿ (1.78 ಬಿಲಿಯನ್ ಡಾಲರ್) ಮೌಲ್ಯದ ಈ ವ್ಯವಹಾರದಲ್ಲಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ (RCSPL) ಸಂಸ್ಥೆಯನ್ನು ಆದಿತ್ಯ ಬಿರ್ಲಾ ನೇತೃತ್ವದ ಬಹುರಾಷ್ಟ್ರೀಯ ಹೂಡಿಕೆ ಒಕ್ಕೂಟ ಖರೀದಿಸಿದೆ. ಡಿಯಾಜಿಯೋ ತನ್ನ ಪ್ರಮುಖ ಮದ್ಯ ಉದ್ಯಮದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಉದ್ದೇಶದಿಂದ ಫ್ರಾಂಚೈಸಿಯನ್ನು ಮಾರಾಟ ಮಾಡಿದೆ.
ಆರ್ಸಿಬಿಯನ್ನು ಒಂದೇ ಸಂಸ್ಥೆ ಖರೀದಿಸಿಲ್ಲ. ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬ್ಲ್ಯಾಕ್ಸ್ಟೋನ್ ಹಾಗೂ ಬೋಲ್ಟ್ ವೆಂಚರ್ಸ್ ಸೇರಿ ರಚಿಸಿರುವ ಹೂಡಿಕೆ ಒಕ್ಕೂಟವೇ ಹೊಸ ಮಾಲೀಕರಾಗಿ ಅಧಿಕಾರ ವಹಿಸಿಕೊಳ್ಳಲಿದೆ.
ಈ ಒಪ್ಪಂದದೊಂದಿಗೆ ಆರ್ಸಿಬಿ ಪುರುಷರ ಐಪಿಎಲ್ ತಂಡ, ಮಹಿಳೆಯರ ಡಬ್ಲ್ಯುಪಿಎಲ್ ತಂಡ, ಆರ್ಸಿಬಿ ಬ್ರ್ಯಾಂಡ್, ಲೋಗೋ ಹಾಗೂ ಎಲ್ಲಾ ವಾಣಿಜ್ಯ ಹಕ್ಕುಗಳು ಹೊಸ ಒಕ್ಕೂಟಕ್ಕೆ ವರ್ಗಾವಣೆಯಾಗಲಿವೆ.
ಆರ್ಯಮಾನ್ ವಿಕ್ರಮ್ ಬಿರ್ಲಾ ನೇತೃತ್ವದ ‘ಬಿಗ್ ಬನ್ಯನ್ ಹೋಲ್ಡಿಂಗ್ಸ್’ ಈ ಒಕ್ಕೂಟದ ಪ್ರಮುಖ ನಾಯಕತ್ವ ವಹಿಸಿಕೊಳ್ಳಲಿದೆ. ಆರ್ಯಮಾನ್ ವಿಕ್ರಮ್ ಬಿರ್ಲಾ ಆರ್ಸಿಬಿಯ ನೂತನ ಅಧ್ಯಕ್ಷರಾಗಲಿದ್ದು, ಟೈಮ್ಸ್ ಗ್ರೂಪ್ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಹೊಸ ಆಡಳಿತದಲ್ಲಿ ಆರ್ಸಿಬಿ ಇನ್ನಷ್ಟು ವಾಣಿಜ್ಯ ವಿಸ್ತರಣೆ ಹಾಗೂ ಕ್ರೀಡಾ ಸಾಧನೆಗಳತ್ತ ಹೆಜ್ಜೆ ಇಡುವ ನಿರೀಕ್ಷೆ ಅಭಿಮಾನಿಗಳಲ್ಲಿದೆ.



