ಮೈಸೂರು : ಮೈಸೂರು ಮಹಾನಗರ ಪಾಲಿಕೆ ಇತ್ತೀಚೆಗೆ ನೀರಿನ ಸಂಪರ್ಕ ಶುಲ್ಕವನ್ನು ಶೇ.30 ಹಾಗೂ ಒಳಚರಂಡಿ ಶುಲ್ಕವನ್ನು ಶೇ.10ರಷ್ಟು ಏರಿಕೆ ಮಾಡಿರುವ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಏಪ್ರಿಲ್ 1ರಿಂದಲೇ ಜಾರಿಗೆ ತಂದಿರುವ ಈ ದರ ಏರಿಕೆ, ಈಗಾಗಲೇ ಬೆಲೆ ಏರಿಕೆಯಿಂದ ನಲುಗಿರುವ ಜನರಿಗೆ ಹೆಚ್ಚುವರಿ ಹೊರೆ ಆಗಿದೆ ಎಂದು ಟೀಕೆಗಳು ಕೇಳಿಬಂದಿವೆ ಎಂದು ಮಾಜಿ ಮೇಯರ್ ಹಾಗೂ ಬಿಜೆಪಿ ಮುಖಂಡ ಶಿವಕುಮಾರ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮೇಯರ್ ಶಿವಕುಮಾರ್, ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು, ಕರ್ನಾಟಕ ನಗರಾಭಿವೃದ್ಧಿ ಅಧಿನಿಯಮದ ಅನ್ವಯ ಪ್ರತಿ ಮೂರು ವರ್ಷಗಳಿಗೊಮ್ಮೆ ದರ ಪರಿಷ್ಕರಣೆ ಸಾಧ್ಯವಾಗಿದ್ದು, 14 ವರ್ಷಗಳ ನಂತರ ಈ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯದ ಉದ್ವಿಗ್ನ ಪರಿಸ್ಥಿತಿಯ ನಡುವೆ ಈ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಭೀತಿ ಎದುರಾಗಿರುವ ಸಂದರ್ಭದಲ್ಲಿ, ಎಲ್‌ಪಿಜಿ ಸೇರಿದಂತೆ ಅಗತ್ಯ ವಸ್ತುಗಳ ಲಭ್ಯತೆ ಮತ್ತು ಬೆಲೆ ಎರಡೂ ಜನರನ್ನು ಕಂಗೆಡಿಸುತ್ತಿವೆ. ರಾಜ್ಯದಲ್ಲಿಯೂ ವಿದ್ಯುತ್, ಹಾಲು ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ದರ ಏರಿಕೆಯ ಪರಿಣಾಮ ಜನಜೀವನ ದುಸ್ತರವಾಗಿದೆ ಎಂದು ಟೀಕಿಸಿದರು.
ಈ ನಡುವೆ, ಮಹಾನಗರ ಪಾಲಿಕೆಯು ನೀರಿನ ಕನಿಷ್ಠ ಮಾಸಿಕ ದರವನ್ನು ₹125ರಿಂದ ₹163ಕ್ಕೆ ಹೆಚ್ಚಿಸಿದೆ. ಜೊತೆಗೆ, ವಿವಿಧ ಬಳಕೆ ಸ್ಲ್ಯಾಬ್ ಗಳಲ್ಲೂ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಮನೆಮಂದಿಗೆ ಮಾಸಿಕ ವೆಚ್ಚ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎಂದರು.
ನೀರಿನ ತೆರಿಗೆ ದರಗಳನ್ನು ಏರಿಸುವ ಮೊದಲು, ಪಾಲಿಕೆ ನಗರದಲ್ಲಿನ ನೀರಿನ ತೆರಿಗೆಗೆ ಸಂಬಂಧಿಸಿದ ಡಿಮಾಂಡ್ (ಬೇಡಿಕೆ), ಕಲೆಕ್ಷನ್ (ಸಂಗ್ರಹ), ಬ್ಯಾಲೆನ್ಸ್ (ಬಾಕಿ) ವಿವರಗಳ ಸಮಗ್ರ ವರದಿ ಹೊಂದಿದ ಡಿಸಿಬಿ ಶ್ವೇತ ಪತ್ರವನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ. ಇದರಿಂದ ತೆರಿಗೆ ಸಂಗ್ರಹದ ಪಾರದರ್ಶಕತೆ ಮತ್ತು ಹಣಕಾಸು ಸ್ಥಿತಿ ಸ್ಪಷ್ಟವಾಗಲಿದೆ ಎಂದು ಅಭಿಪ್ರಾಯಿಸಲಾಗಿದೆ. ಒಟ್ಟಿನಲ್ಲಿ, ಇಂತಹ ಸಂಕಷ್ಟದ ಸಮಯದಲ್ಲಿ ಪಾಲಿಕೆಯ ದರ ಏರಿಕೆ ನಿರ್ಧಾರವನ್ನು ಹಿಂಪಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದರು.



