Friday, July 3, 2026
Google search engine

Homeರಾಜ್ಯಪಾದಚಾರಿ ಮಾರ್ಗಗಳ ಒತ್ತುವರಿ ತೆರವು; ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಪಾದಚಾರಿ ಮಾರ್ಗಗಳ ಒತ್ತುವರಿ ತೆರವು; ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತರಕ್ಕೆ ಸಚಿವ ಕೃಷ್ಣ ಬೈರೇಗೌಡ ಸೂಚನೆ

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳಿಗೆ ಯಾವುದೇ ರೀತಿಯ ಅನ್ಯಾಯವಾಗಲು ಸರ್ಕಾರ ಬಿಡುವುದಿಲ್ಲ. ಆದರೆ, ಪಾದಚಾರಿಗಳ ಜೀವರಕ್ಷಣೆಯೂ ಸರ್ಕಾರದ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದ್ದಾರೆ.

ನಗರದ ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸುವ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ವರ್ಚುವಲ್‌ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಮುಖ ರಸ್ತೆಗಳಿಂದ ವಾರ್ಡ್‌ ರಸ್ತೆಗಳಿಗೆ ಸ್ಥಳಾಂತರ

ನಗರದ ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿಯನ್ನು ತೆರವುಗೊಳಿಸಲಾಗುತ್ತಿದ್ದು, ಅಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳಿಂದ ವಾರ್ಡ್‌ ಮಟ್ಟದ ರಸ್ತೆಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

"ನಾವು ಯಾವುದೇ ಕಾರಣಕ್ಕೂ ಬೀದಿ ಬದಿ ವ್ಯಾಪಾರಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುತ್ತಿಲ್ಲ, ಬದಲಿಗೆ ಪರ್ಯಾಯ ವ್ಯವಸ್ಥೆಯಾಗಿ ವಾರ್ಡ್‌ ರಸ್ತೆಗಳಿಗೆ ಸ್ಥಳಾಂತರಿಸುತ್ತಿದ್ದೇವೆ. ಕೇವಲ ವ್ಯಾಪಾರಿಗಳಷ್ಟೇ ಅಲ್ಲದೆ, ಅನಾಥ ವಾಹನಗಳು, ಅಕ್ರಮ ಪಾರ್ಕಿಂಗ್‌ ಸೇರಿದಂತೆ ಸಾರ್ವಜನಿಕರ ಓಡಾಟಕ್ಕೆ ಅಡ್ಡಿಯಾಗಿರುವ ಎಲ್ಲಾ ಒತ್ತುವರಿಗಳನ್ನು ಹಂತ ಹಂತವಾಗಿ ತೆರವುಗೊಳಿಸಿ, ಸುರಕ್ಷಿತ ಪಾದಚಾರಿ ಮಾರ್ಗ ಕಲ್ಪಿಸಬೇಕು," ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಭಿವೃದ್ಧಿ ಕಾಮಗಾರಿ ಹಾಗೂ ಸಾರ್ವಜನಿಕರ ಅಭಿಪ್ರಾಯ

ಒತ್ತುವರಿ ಮುಕ್ತಗೊಳಿಸಿದ ರಸ್ತೆಗಳಲ್ಲಿ ತಕ್ಷಣವೇ ಉತ್ತಮ ಗುಣಮಟ್ಟದ ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ಆರಂಭಿಸಬೇಕು. ಕಾಮಗಾರಿ ಮುಗಿದ ಬಳಿಕ ಸ್ಥಳೀಯ ನಾಗರಿಕರೊಂದಿಗೆ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಬೇಕು ಎಂದು ಸಚಿವರು ನಿರ್ದೇಶಿಸಿದರು.

ವಿಶೇಷ ಅಭಿಯಾನಗಳ ವೇಳಾಪಟ್ಟಿ

ಜುಲೈ 10 ರಿಂದ: ನಗರದ ರಸ್ತೆ ಬದಿಗಳಲ್ಲಿ ಕೈಬಿಡಲಾಗಿರುವ ಅನಾಥ ವಾಹನಗಳ ತೆರವು ಅಭಿಯಾನ ಆರಂಭವಾಗಲಿದೆ. ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಲಿದ್ದಾರೆ.

ಜುಲೈ 15 ರ ನಂತರ: ಬೃಹತ್‌ ಕಟ್ಟಡ ತ್ಯಾಜ್ಯ (Debris) ಹಾಗೂ ರಸ್ತೆ ಬದಿಯ ಗಿಡಗಂಟಿಗಳ ತೆರವು ಅಭಿಯಾನ ಕೈಗೊಳ್ಳಲಾಗುತ್ತದೆ.

ಮುಂದಿನ ಹಂತದಲ್ಲಿ: ಮನೆ ಹಾಗೂ ವಾಣಿಜ್ಯ ಕಟ್ಟಡಗಳ ಮುಂದೆ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿ ನಿರ್ಮಿಸಿರುವ ರ್ಯಾಂಪ್‌ಗಳ (Ramps) ತೆರವಿಗೂ ವಿಶೇಷ ಕಾರ್ಯಾಚರಣೆ ನಡೆಯಲಿದೆ.

ಯಾರ ಜೀವನೋಪಾಯಕ್ಕೂ ತೊಂದರೆ ಇಲ್ಲ ‌

ಸುಪ್ರೀಂ ಕೋರ್ಟ್‌ ನಿರ್ದೇಶನ ಹಾಗೂ ಸಾರ್ವಜನಿಕರ ಬಹುಕಾಲದ ಬೇಡಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿರುವ ಸಚಿವರು, ಯಾರ ಜೀವನೋಪಾಯಕ್ಕೂ ತೊಂದರೆ ಉಂಟುಮಾಡುವುದು ಸರ್ಕಾರದ ಉದ್ದೇಶವಲ್ಲ ಎಂದಿದ್ದಾರೆ.

ನಗರದ ಕೇವಲ ಶೇ. 20ರಷ್ಟು ಪ್ರಮುಖ ರಸ್ತೆಗಳಲ್ಲಿ ಮಾತ್ರ ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಉಳಿದ ರಸ್ತೆಗಳಲ್ಲಿ ವ್ಯಾಪಾರಕ್ಕೆ ಯಥಾಸ್ಥಿತಿ ಅವಕಾಶ ಇರುತ್ತದೆ. ಬೆಂಗಳೂರನ್ನು ಸುರಕ್ಷಿತ ಹಾಗೂ ವ್ಯವಸ್ಥಿತ ನಗರವನ್ನಾಗಿ ಮಾಡಲು ಸಾರ್ವಜನಿಕರು ಮತ್ತು ವ್ಯಾಪಾರಿಗಳು ಮುಕ್ತವಾಗಿ ಸಹಕರಿಸಬೇಕು ಎಂದು ಕೃಷ್ಣ ಬೈರೇಗೌಡ ಮನವಿ ಮಾಡಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular