ಚಾಮರಾಜನಗರ : ಜಿಲ್ಲೆಯ ಕೊಳ್ಳೇಗಾಲ ಹೊರವಲಯದಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣ ಸಂಚಲನ ಮೂಡಿಸಿದೆ. ಬೆಂಗಳೂರು ಮೂಲದ ರೌಡಿಶೀಟರ್ ಜಹೀರ್ ನೇತೃತ್ವದಲ್ಲಿ ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಪಾರ್ಟಿ ಪೊಲೀಸರ ದಾಳಿ ವೇಳೆ ಬಯಲಾಗಿದೆ. ಜಹೀರ್ ಜನ್ಮದಿನದ ಅಂಗವಾಗಿ ವಿಶೇಷವಾಗಿ ಈ ಪಾರ್ಟಿ ಆಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.
ಪಾರ್ಟಿಯಲ್ಲಿ ಭಾಗಿಯಾದವರು ಗಾಂಜಾ ಹಾಗೂ ಚರಸ್ ಸೇವಿಸಿ ಮೋಜುಮಸ್ತಿಯಲ್ಲಿ ತೊಡಗಿದ್ದರು. ಬಳಿಕ ಪೊಲೀಸರು ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ 15 ಮಂದಿ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಈ ಪಾರ್ಟಿ ಕೊಳ್ಳೇಗಾಲದ ಎ1 ಕಾಂಟ್ರಾಕ್ಟರ್ ಫಯಾಜ್ ಖಾನ್ ಅವರ ರೆಸಾರ್ಟ್‌ನಲ್ಲಿ ನಡೆದಿದ್ದು, ಈ ವಿಚಾರ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. ಫಯಾಜ್ ಖಾನ್ ಪ್ರಭಾವಿ ರಾಜಕೀಯ ಸಂಪರ್ಕ ಹೊಂದಿರುವ ವ್ಯಕ್ತಿಯಾಗಿದ್ದು, ಕಾಂಗ್ರೆಸ್ ನಾಯಕರ ಆಪ್ತನೆಂದು ಹೇಳಲಾಗುತ್ತಿದೆ.
ಪಾರ್ಟಿಯಲ್ಲಿ ಜಹೀರ್ ಕುಟುಂಬ ಸದಸ್ಯರೂ ಭಾಗಿಯಾಗಿದ್ದರೆಂದು ಮೂಲಗಳು ತಿಳಿಸಿವೆ. ಮಹಿಳೆಯರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಲೇಡಿ ಕಾನ್ಸ್ಟೇಬಲ್‌ಗಳು ವಿಚಾರಣೆ ಮುಂದುವರಿಸಿದ್ದಾರೆ. ಸದ್ಯ ಎಲ್ಲಾ ಆರೋಪಿಗಳನ್ನು ಕೊಳ್ಳೇಗಾಲ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣ ಸಂಬಂಧ ಇನ್ನಷ್ಟು ಮಾಹಿತಿಗಾಗಿ ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.



