Sunday, April 5, 2026
Google search engine

Homeರಾಜ್ಯ ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ : ಡಿಸಿ ಶ್ರೀರೂಪ ಸೂಚನೆ

 ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವವರ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ : ಡಿಸಿ ಶ್ರೀರೂಪ ಸೂಚನೆ

  ಚಾಮರಾಜನಗರ :  ಜಿಲ್ಲೆಯ ಇಟ್ಟಿಗೆ ಕಾರ್ಖಾನೆ, ಅಂಗಡಿ, ಉದ್ಯಮ, ಗ್ಯಾರೇಜ್, ಎಸ್ಟೇಟ್, ಇನ್ನಿತರ ಕಡೆ ಅನಿರೀಕ್ಷಿತ ಭೇಟಿ ನೀಡಿ ಬಾಲಕಾರ್ಮಿಕರು ದುಡಿಮೆ ಮಾಡುತ್ತಿರುವುದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಸಂಬಂಧಪಟ್ಟ ಮಾಲೀಕರ ವಿರುದ್ದ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಶ್ರೀರೂಪ ಸೂಚನೆ ನೀಡಿದರು.

 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆ ಸಂಬಂಧ ನಡೆದ ಜಿಲ್ಲಾ ಮಟ್ಟದ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ  ಮಾತನಾಡಿದರು.

 ಬಾಲಕಾರ್ಮಿಕ ಪದ್ದತಿಯು ಮಕ್ಕಳನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಆರ್ಥಿಕವಾಗಿ ಶೋಷಣೆಗೆ ಒಳಪಡಿಸಿ ಅವರ ಶಿಕ್ಷಣ ಹಾಗೂ ಸರ್ವಾಂಗೀಣ ಪ್ರಗತಿಯ ಅವಕಾಶಗಳನ್ನು ತಡೆಗಟ್ಟಲಿವೆ. ದುಡಿಮೆಯಲ್ಲಿ ತೊಡಗಿರುವ ಶಿಕ್ಷಣ ವಂಚಿತ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಬೇಕಿದೆ. ಜಿಲ್ಲೆಯ ಯಾವುದೇ ಉದ್ಯಮ, ಕೆಲಸ ಮಾಡುವ ಸ್ಥಳಗಳಲ್ಲಿ ಬಾಲಕಾರ್ಮಿಕರಿಂದ ದುಡಿಸಿಕೊಳ್ಳುವುದು ಅಪರಾಧವಾಗಲಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.

ವಿಶೇಷವಾಗಿ ಕೈಗಾರಿಕಾ ಪ್ರದೇಶಗಳು, ಬೇರೆ ರಾಜ್ಯಗಳಿಂದ ವಲಸೆ ಬಂದಿರುವ ಕುಟುಂಬ, ಹಾಡಿ ವ್ಯಾಪ್ತಿಯಲ್ಲಿರುವ ಎಸ್ಟೇಟ್, ಇನ್ನಿತರ ಕಡೆ ಭೇಟಿ ನೀಡಬೇಕು. ಬಾಲಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಖುದ್ದು ಪರಿಶೀಲಿಸಬೇಕು. ಅಪಾಯಕಾರಿ ಉದ್ಯಮಗಳಲ್ಲಿ ಕಿಶೋರ ಕಾರ್ಮಿಕರನ್ನು ದುಡಿಸಿಕೊಳ್ಳುವಂತಿಲ್ಲ. ಇಂತಹಕಡೆ ನಿಗದಿತ ಅವಧಿಗೂ ಹೆಚ್ಚು ಕಾಲ ಕೆಲಸ ಮಾಡುತ್ತಿರುವುದು ಕಂಡುಬಂದಲ್ಲಿ ಕ್ರಮ ವಹಿಸಬೇಕು ಎಂದು    ನಿರ್ದೇಶನ ನೀಡಿದರು. 

14 ವರ್ಷದೊಳಗಿನ ಮಕ್ಕಳು ಯಾವುದೇ ಉದ್ಯೋಗ ಅಥವಾ ಪ್ರಕ್ರಿಯೆಗಳಲ್ಲಿ ತೊಡಗಿದ್ದರೆ ಮತ್ತು 18 ವರ್ಷ ವಯಸ್ಸಿನವರೆಗಿನ ಕಿಶೋರರು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡುವುದು ಕಂಡುಬಂದಲ್ಲಿ ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ, ಪಂಚಾಯತ್ ರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆ, ನಗರಾಭಿವೃದ್ದಿ, ಕರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ, ರೇಷ್ಮೆ, ಕೃಷಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸಾರ್ವಜನಿಕರು ದೂರು ನೀಡಬಹುದು. ಅಲ್ಲದೇ ಈ ಇಲಾಖೆಗಳ ಅಧಿಕಾರಿಗಳು ಉದ್ಯಮಗಳಿಗೆ ಭೇಟಿ ನೀಡಿ ಬಾಲಕಾರ್ಮಿಕರನ್ನು ದುಡಿಸಿಕೊಳುತ್ತಿದ್ದಲ್ಲಿ ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಬೇಕು ಎಂದರು.

 ಶಾಲೆ ತೊರೆದ ಮಕ್ಕಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕು. 5 ಹಾಗೂ 7ನೇ ತರಗತಿ ಬಳಿಕ ಮಕ್ಕಳು ಶಾಲೆಗೆ ದಾಖಲಾಗುತ್ತುದ್ದಾರೆಯೇ ಎಂಬ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಒಂದು ವೇಳೆ ಶಾಲೆಗೆ ದಾಖಲಾಗದಿದ್ದರೆ ಅಥವಾ ನಿರಂತರವಾಗಿ ಗೈರು ಹಾಜರಾಗುತ್ತಿರುವುದು ಕಂಡು ಬಂದಲ್ಲಿ ಕೂಡಲೇ ಪೋಷಕರ ಮನೆಗೆ ತೆರಳಿ ಮನವೊಲಿಸಿ ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಪ್ರೇರೇಪಿಸಬೇಕು ಎಂದು   ತಿಳಿಸಿದರು.

 ಹಿರಿಯ ಸಿವಿಲ್ ನ್ಯಾಯಾಧೀಶ  ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ   ಮಾತನಾಡಿ ಅಪಾಯಕಾರಿಯಲ್ಲದ ಉದ್ಯಮಗಳಲ್ಲಿ ಕಿಶೋರರನ್ನು ನೇಮಿಸಿಕೊಂಡಾಗ ಪಾಲಿಸಬೇಕಾದ ಷರತ್ತು ಹಾಗೂ ನಿಬಂಧನೆಗಳನ್ನು ಕೆಲಸದ ಸ್ಥಳಗಳಲ್ಲಿ ಎದ್ದು ಕಾಣುವಂತೆ ಪ್ರದರ್ಶಿಸಬೇಕು. ವಿಶ್ರಾಂತಿ ಹಾಗೂ ಕೆಲಸದ ಅವಧಿಯನ್ನು ನಿಯಮಾನುಸಾರ ಗೊತ್ತು ಮಾಡಬೇಕು. ಯಾವುದೇ ಉಲ್ಲಂಘನೆಯಾದರೆ ದೂರು ದಾಖಲಿಸಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಮುತ್ತುರಾಜ್  ಮಾತನಾಡಿ ಬಾಲಕಾರ್ಮಿಕ ಪದ್ದತಿ ನಿಷೇಧಕ್ಕೆ ಸಂಬಂಧಿಸಿದಂತೆ ಅನುಸರಿಸಲಾಗುವ ಎಲ್ಲ ಪ್ರಕ್ರಿಯೆಗಳಲ್ಲಿ ಪೊಲೀಸ್ ಇಲಾಖೆ ನೆರವು ನೀಡಲಿದೆ. ಎಲ್ಲಿಯೇ ಆಗಲಿ ಬಾಲಕಾರ್ಮಿಕರು ದುಡಿಯುತ್ತಿರುವ ಮಾಹಿತಿ ನೀಡಿದ್ದಲ್ಲಿ ಮುಂದಿನ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಬಾಲಕಾರ್ಮಿಕ ಪದ್ದತಿ, ಬಾಲ್ಯವಿವಾಹ ನಿಷೇಧ ಕುರಿತ ಮಾಹಿತಿ ನೀಡುವ ಪೋಸ್ಟರ್ ಗಳನ್ನು ಬಿಡುಗಡೆ ಮಾಡಲಾಯಿತು.  

ಜಿಲ್ಲಾ ಕಾರ್ಮಿಕ ಅಧಿಕಾರಿ ಟಿ.ಸಿ. ರಾಮಚಂದ್ರಯ್ಯ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕರಾದ ಎಂ. ಮಹೇಶ್, ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಅರುಣ್ ಕುಮಾರ್, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಚಂದ್ರಪಾಟೀಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ಸುರೇಶ್, ಮಕ್ಕಳ ರಕ್ಷಣಾಧಿಕಾರಿ ಮಂಜುಳಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ವಿಶ್ವನಾಥ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular