ಮಂಗಳೂರು:
ಭಾನುವಾರ ರಾತ್ರಿ ಸುರಿದ ಭಾರೀ ಮಳೆ ಹಾಗೂ ಗಾಳಿಯ ಆರ್ಭಟಕ್ಕೆ ಮರವೊಂದು ಧರೆಗುರುಳಿ ಮರ ಮತ್ತು ವಿದ್ಯುತ್ ಕಂಬವು ಕೇರಳ ಮೂಲದವರೊಬ್ಬರ ಮನೆಯ ಮೇಲೆ ಬಿದ್ದ ಘಟನೆ ಮಂಗಳೂರಲ್ಲಿ ನಡೆದಿದೆ.
ಬಜಾಲ್ ಜಲ್ಲಿಗುಡ್ಡದ ನಿವಾಸಿ ಜ್ಯೋತಿಷ್ ಕುಮಾರ್ ಅವರ ‘ಸೌಹಾರ್ದ ನಿಲಯ’ ಎಂಬ ಮನೆಯ ಮೇಲೆ ಭಾನುವಾರ ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಮರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಒಂದು ಭಾಗ ಜಖಂಗೊಂಡಿದೆ.
ಅಪಘಾತ ಸಂಭವಿಸಿದ ಸಮಯದಲ್ಲಿ ಜ್ಯೋತಿಷ್ ಕುಮಾರ್ ಅವರು ತಮ್ಮ ಕುಟುಂಬದೊಂದಿಗೆ ಮನೆಯಲ್ಲೇ ಇದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಿಂದಾಗಿ ರಾತ್ರಿಯಿಂದಲೇ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಸೋಮವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಪುನಃಸ್ಥಾಪಿಸಲಾಯಿತು.



