Monday, April 6, 2026
Google search engine

Homeಕ್ರೀಡೆಟಿಮ್ ಡೇವಿಡ್ ಅಬ್ಬರ, ಪಡಿಕ್ಕಲ್ ಅರ್ಧಶತಕ; ಚೆನ್ನೈ ವಿರುದ್ಧ ಆರ್‌ ಸಿಬಿಗೆ ಭರ್ಜರಿ ಜಯ!

ಟಿಮ್ ಡೇವಿಡ್ ಅಬ್ಬರ, ಪಡಿಕ್ಕಲ್ ಅರ್ಧಶತಕ; ಚೆನ್ನೈ ವಿರುದ್ಧ ಆರ್‌ ಸಿಬಿಗೆ ಭರ್ಜರಿ ಜಯ!

ಬೆಂಗಳೂರು: ಐಪಿಎಲ್ ಟಿ20 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಭರ್ಜರಿ ಪ್ರದರ್ಶನ ನೀಡುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು 43 ರನ್‌ಗಳ ಅಂತರದಿಂದ ಸೋಲಿಸಿದೆ. ಟಿಮ್ ಡೇವಿಡ್ ಮತ್ತು ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಹೋರಾಟ ಆರ್‌ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಇದು ಸಿಎಸ್‌ಕೆ ತಂಡಕ್ಕೆ ಸರಣಿಯಲ್ಲಿ ಎದುರಾದ ಸತತ ಮೂರನೇ ಸೋಲಾಗಿದೆ.

ಆರ್‌ಸಿಬಿ ಬೃಹತ್ ಮೊತ್ತ: 250 ರನ್!

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡವು ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 250 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಆರಂಭಿಕ ಆಟಗಾರ ವಿರಾಟ್ ಕೊಹ್ಲಿ (28 ರನ್) ಬೇಗನೆ ಔಟಾದರು. ಆದರೆ ನಂತರ ಬಂದ ದೇವದತ್ ಪಡಿಕ್ಕಲ್ (50 ರನ್, 29 ಎಸೆತ) ಮತ್ತು ಫಿಲ್ ಸಾಲ್ಟ್ (46 ರನ್) ತಂಡಕ್ಕೆ ಆಸರೆಯಾದರು.

ನಂತರ ಕ್ರೀಸ್‌ಗಿಳಿದ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಸಿಡಿಸಿದರು. ನಾಯಕ ರಜತ್ ಪಾಟಿದಾರ್ ಕೂಡ ಅಬ್ಬರಿಸಿ 19 ಎಸೆತಗಳಲ್ಲಿ 6 ಸಿಕ್ಸರ್‌ಗಳೊಂದಿಗೆ ಅಜೇಯ 48 ರನ್ ಗಳಿಸಿದರು. ಈ ಜೋಡಿಯು ನಾಲ್ಕನೇ ವಿಕೆಟ್‌ಗೆ ಕೇವಲ 36 ಎಸೆತಗಳಲ್ಲಿ 99 ರನ್ ಕಲೆಹಾಕಿತು.

ಚೆನ್ನೈ ಹೋರಾಟ ವ್ಯರ್ಥ

ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆರಂಭ ಅತೀ ಕಳಪೆಯಾಗಿತ್ತು. ನಾಯಕ ರುತುರಾಜ್ ಗಾಯಕವಾಡ್ (07), ಆಯುಷ್ ಮ್ಹಾತ್ರೆ (01) ಮತ್ತು ಸಂಜು ಸ್ಯಾಮ್ಸನ್ ಅಲ್ಪ ಮೊತ್ತಕ್ಕೆ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ (50 ರನ್) ಜವಾಬ್ದಾರಿಯುತ ಆಟವಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಸಿಎಸ್‌ಕೆ ತಂಡವು 19.4 ಓವರ್‌ಗಳಲ್ಲಿ 207 ರನ್‌ಗಳಿಗೆ ಆಲ್‌ಔಟ್ ಆಯಿತು. ತಂಡದ ಪರ ಪ್ರಶಾಂತ್ ವೀರ್ 43 ರನ್ ಮತ್ತು ಜೇಮಿ ಓವರ್ಟನ್ 37 ರನ್ ಗಳಿಸಿದರು.

ಬೌಲಿಂಗ್ ಸಾಧನೆ

ಆರ್‌ಸಿಬಿ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್ ಕುಮಾರ್ 41 ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು. ಜ್ಯಾಕೋಬ್ ಡಫಿ, ಕೃನಾಲ್ ಪಾಂಡ್ಯ ಮತ್ತು ಅಭಿನಂದನ್ ಸಿಂಗ್ ತಲಾ ಎರಡು ವಿಕೆಟ್ ಪಡೆದು ಚೆನ್ನೈ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು. ಸುಯಶ್ ಶರ್ಮಾಗೆ ಒಂದು ವಿಕೆಟ್ ಲಭಿಸಿತು

RELATED ARTICLES
- Advertisment -
Google search engine

Most Popular