Monday, April 6, 2026
Google search engine

Homeರಾಜಕೀಯಬಿಜೆಪಿಯವರು ಸಂವಿಧಾನ ಮತ್ತು ಬಡವರ ವಿರೋಧಿಗಳು : ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಸಂವಿಧಾನ ಮತ್ತು ಬಡವರ ವಿರೋಧಿಗಳು : ಸಿಎಂ ಸಿದ್ದರಾಮಯ್ಯ

ದಾವಣಗೆರೆ : ಉಪಚುನಾವಣೆಯ ಅಂತಿಮ ಹಂತದ ಪ್ರಚಾರಕ್ಕಾಗಿ ದಾವಣಗೆರೆಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಸಂವಿಧಾನ ಮತ್ತು ಬಡವರ ವಿರೋಧಿಗಳು. ಅವರು ಯಾವ ಆಧಾರದ ಮೇಲೆ ಮತ ಕೇಳುತ್ತಿದ್ದಾರೆ? ಒಂಬತ್ತು ವರ್ಷ ಅಧಿಕಾರದಲ್ಲಿದ್ದಾಗ ಅವರು ಮಾಡಿದ್ದೇನು ಎಂದು ಮೊದಲು ಜನರಿಗೆ ಹೇಳಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾವು ಬಡವರ ಪರ ಇರುವ ಪಕ್ಷ, ಆದರೆ ಅವರದ್ದು ಸಮಾಜವನ್ನು ಒಡೆಯುವ ಪಕ್ಷ. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದವರೇ ಈಗ ಅವುಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.

ಇನ್ನೂ ಕುಮಾರಸ್ವಾಮಿ ಅವರ ಕುಟುಂಬ ರಾಜಕಾರಣದ ಟೀಕೆಗೆ ತಿರುಗೇಟು ನೀಡಿದ ಸಿಎಂ, ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವವರಿಗೆ ನೈತಿಕತೆ ಇರಬೇಕು. ಅವರ ಅಪ್ಪ, ಇಬ್ಬರು ಮಕ್ಕಳು, ಇಬ್ಬರು ಸೊಸೆಯಂದಿರು ಹಾಗೂ ನಾಲ್ವರು ಮೊಮ್ಮಕ್ಕಳು ರಾಜಕಾರಣದಲ್ಲಿದ್ದಾರೆ. ಚನ್ನಪಟ್ಟಣದಲ್ಲಿ ಸೋತವರು ಅವರ ಮಗ ಅಲ್ವಾ? ಜನರೇ ಅವರನ್ನು ಕರೆತಂದು ಆಯ್ಕೆ ಮಾಡಿದ್ದಾರೆ ಎಂದು ಹೇಳುವುದು ಸುಳ್ಳು. ಜನ ಬಯಸಿದರೆ ರಾಜಕಾರಣ ಮಾಡಲಿ, ಆದರೆ ಸುಮ್ಮನೆ ಬೇರೆಯವರ ಬಗ್ಗೆ ಮಾತನಾಡಬಾರದು ಎಂದು ಗುಡುಗಿದರು.

ಸ್ವಂತ ಪಕ್ಷ ಕಟ್ಟುವಂತೆ ಹೆಚ್‌ಡಿಕೆ ಹಾಕಿದ್ದ ಸವಾಲಿಗೆ ಉತ್ತರಿಸಿದ ಸಿದ್ದರಾಮಯ್ಯ, ನಾನು ಜಾತ್ಯತೀತ ತತ್ವವಿರುವ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ ಪಕ್ಷ 59 ಸೀಟುಗಳನ್ನು ಗೆದ್ದಿತ್ತು. ನಾನು ಬಂದ ಮೇಲೆ ಅವರು ಎಂದಾದರೂ ಅಷ್ಟು ಸೀಟು ಗೆದ್ದಿದ್ದಾರೆಯೇ? 2004ರಲ್ಲಿ 59 ಇದ್ದ ಅವರ ಸಂಖ್ಯಾಬಲ ಈಗ 19ಕ್ಕೆ ಕುಸಿದಿದೆ. ದಿನೇ ದಿನೇ ಅವರ ಶಕ್ತಿ ಕುಂದುತ್ತಿದೆ ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಚಿವ ಜಮೀರ್ ಅಹ್ಮದ್ ಬಾರದಿರುವ ಕುರಿತು ಸ್ಪಷ್ಟನೆ ನೀಡಿದ ಸಿಎಂ, ಜಮೀರ್ ಅವರಿಗೆ ಸಮಯದ ಅಭಾವವಿದೆ. ಬಾಗಲಕೋಟೆಯಲ್ಲಿ 33 ಸಾವಿರ ಮುಸ್ಲಿಂ ಮತದಾರರಿದ್ದಾರೆ, ಅಲ್ಲಿ ಅವರ ಅವಶ್ಯಕತೆ ಹೆಚ್ಚಿದೆ. ಹೀಗಾಗಿ ಅವರು ಅಲ್ಲಿ ಪ್ರಚಾರ ನಡೆಸುತ್ತಿದ್ದಾರೆ ಎಂದರು. 

ಅಲ್ಲದೆ, ಮುಸಲ್ಮಾನರ ಸ್ವಾಭಿಮಾನದ ಬಗ್ಗೆ ಮಾತನಾಡುವ ಛಲವಾದಿ ನಾರಾಯಣಸ್ವಾಮಿ ಅವರಿಗೆ ಯಾವ ನೈತಿಕತೆ ಇದೆಯಾ ಎಂದು ಪ್ರಶ್ನಿಸಿದ ಸಿಎಂ, ಬಿಜೆಪಿಯವರ ಬಗ್ಗೆ ಈ ಹಿಂದೆ ಅವರು ಏನೆಲ್ಲಾ ಬೈದಿದ್ದಾರೆ ಎಂಬುದು ತಮಗೆ ತಿಳಿದಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಕೊನೆಯದಾಗಿ ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಡ್ಡಿಯಾಗುತ್ತಿದೆ ಎಂಬ ಆರೋಪಕ್ಕೆ ಕೊಟ್ಟ ಕುದುರೆಯನ್ನು ಏರಲಾರದವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಹೇಳುವ ಮೂಲಕ ಎದುರಾಳಿಗಳಿಗೆ ತಿರುಗೇಟು ನೀಡಿದರು.

RELATED ARTICLES
- Advertisment -
Google search engine

Most Popular