ಮೈಸೂರು : ರಾಜ್ಯದಲ್ಲಿ 2 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು ನಿಶ್ಚಿತ ಎರಡು ಕ್ಷೇತ್ರಗಳಲ್ಲಿ ಈಗಾಗಲೇ ನಾವು ಗೆದ್ದಿದ್ದೇವೆ ಎಂದು ಮೈಸೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳ ಜತೆ ಮಾತಾಡಿದ ಅವರು ಎರಡು ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇವೆ. ಹೋದ ಕಡೆಯೆಲ್ಲ ಜನ ಬೆಂಬಲ ಚೆನ್ನಾಗಿದೆ. ನಮ್ಮ ಗ್ಯಾರೆಂಟಿಗಳು ನಮ್ಮ ಕೈಹಿಡಿಯುತ್ತದೆ. ಈ ಹಿನ್ನಲೆ ನಾವು ಈಗಾಗಲೇ ಎರಡು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಜನರು ನಮ್ಮ ಸರ್ಕಾರದ ಪರವಾಗಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಉಪಚುನಾವಣೆ ಫಲಿತಾಂಶ ರಾಜ್ಯದ ಕಾಂಗ್ರೆಸ್ ನಾಯಕತ್ವದ ಮೇಲೆ ಯಾವುದೇ ಪರಿಣಾಮ ಬೀರಲ್ಲ.ಸಿಎಂ ಬದಲಾವಣೆಗೂ ಉಪಚುನಾವಣೆ ಫಲಿತಾಂಶಕ್ಕೂ ಸಂಬಂಧವಿಲ್ಲ. ಈ ಚುನಾವಣೆ ಯಾವುದಕ್ಕೂ ಮಾನದಂಡ ಅಲ್ಲ ಮುಂದಿನ ಚುನಾವಣೆಯ ದಿಕ್ಸೂಚಿಯೂ ಅಲ್ಲ. ಬಿಜೆಪಿ ಅವರು ಏನು ಬೇಕಾದರೂ ಹೇಳಲಿ ಎಂದು ಪರಂ ಟಾಂಗ್ ನೀಡಿದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಪರಂ ಪ್ರತಿಕ್ರಿಯೆ ನೀಡಿ, ಸದ್ಯದ ಪರಿಸ್ಥಿತಿಗೆ ಸಿಎಂ ಸಿದ್ದರಾಮಯ್ಯ ಅವರೆ 5 ವರ್ಷ ಸಿಎಂ ಆಗಿರುತ್ತಾರೆ. ಸಿದ್ದರಾಮಯ್ಯ ಬದಲಾವಣೆ ನಾನು ಮಾಡೋದಕ್ಕೆ ಆಗತ್ತಾ? ಬದಲಾವಣೆ ಮಾಡೋದು ಹೈ ಕಮಾಂಡ್ ಗೆ ಬಿಟ್ಟ ವಿಚಾರ. ಸದ್ಯಕ್ಕೆ ಬದಲಾವಣೆ ಪ್ರಶ್ನೆಯೇ ಇಲ್ಲ. ಕೆಲ ಶಾಸಕರು ಅವರ ಅಭಿಪ್ರಾಯ ಹೇಳುತ್ತಿದ್ದಾರೆ. ಹೈ ಕಮಾಂಡ್ ಎಲ್ಲವನ್ನೂ ನೋಡುತ್ತಿದೆ. ಸದನದಲ್ಲಿ ಸಿದ್ದರಾಮಯ್ಯ ಅವರೇ ಹೇಳಿದದಂತೆ ನಮ್ಮ ಪಕ್ಷದ ಎಲ್ಲಾ ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ ಆದರೆ ಈಗ ಸಿಎಂ ಖುರ್ಚಿ ಖಾಲಿ ಇಲ್ಲ ಎಂದು ಹೇಳಿದರು.
ಡಿಕೆ ಶಿವಕುಮಾರ್ ನಮ್ಮ ನಾಯಕರು, ಪಕ್ಷದ ಅಧ್ಯಕ್ಷರು, ಡಿಸಿಎಂ ಕೂಡ ಆಗಿದ್ದಾರೆ ಸದ್ಯಕ್ಕೆ ಯಾವುದೇ ಗೊಂದಲ ಇಲ್ಲ ಕೆಲ ಶಾಸಕರು, ಪರಮೇಶ್ವರ್ ಹೇಳಿದ ತಕ್ಷಣ ಏನು ಆಗಲ್ಲ ಎಲ್ಲವೂ ಹೈ ಕಮಾಂಟ್‌ಗೆ ಬಿಟ್ಟಿದ್ದು ಎಂದು ಹೇಳಿದರು.
ಇನ್ನೂ ಕಾಳಸಂತೆಯಲ್ಲಿ ಗ್ಯಾಸ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರಕ್ಕೆ ಮಾತಾಡಿದ ಪರಮೇಶ್ವರ್, ಆಹಾರ ಇಲಾಖೆ ಅಧಿಕಾರಿಗಳು ಮಾಹಿತಿ ಕೊಟ್ರೆ ಅಂತಹ ಕಡೆ ಪೊಲೀಸರು ರೇಡ್ ಮಾಡಿ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಈಗಾಗಲೇ ಪೊಲೀಸರು ಆಹಾರ ಇಲಾಖೆ ಅಧಿಕಾರಿಗಳ ಜೊತೆ ರೇಡ್ ಮಾಡುತ್ತಿದ್ದಾರೆ. ಒಂದಷ್ಟು ಪ್ರಕರಣಗಳು ಕೂಡ ದಾಖಲಾಗಿದ್ದು, ಮುಲಾಜಿಲ್ಲದೆ ದಂಧೆಕೋರರ ಮೇಲೆ ಕ್ರಮ ಆಗತ್ತೆ ಎಂದು ವಾರ್ನಿಂಗ್ ನೀಡಿದರು.



