ನವದೆಹಲಿ : ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ಏರ್ಪಟ್ಟಿದೆ. ಇದರ ಸಂಪೂರ್ಣ ಕ್ರೆಡಿಟ್ ಪಡೆಯಲು ಪಾಕಿಸ್ತಾನ ಹರಸಾಹಸ ಪಡುತ್ತಿದ್ದರೆ, ಇತ್ತ ಭಾರತದಲ್ಲಿನ ಇಸ್ರೇಲ್ ರಾಯಭಾರಿ ಪಾಕಿಸ್ತಾನದ ಅಸಲಿ ಮುಖವಾಡವನ್ನು ಕಳಚಿದ್ದಾರೆ.
ಹಾಗಾದರೆ ನಡೆದಿದ್ದೇನು?
ಕಳೆದ ಕೆಲವು ವಾರಗಳಿಂದ ಇರಾನ್ ಮತ್ತು ಅಮೆರಿಕ ನಡುವೆ ಸಂದೇಶವಾಹಕನಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನ, ಉಭಯ ದೇಶಗಳ ನಡುವೆ ಕದನ ವಿರಾಮ ಮಾಡಿಸುವಲ್ಲಿ ತಾನು ಯಶಸ್ವಿಯಾಗಿದ್ದೇನೆ ಎಂದು ಬೀಗುತ್ತಿದೆ. ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಈ ಬಗ್ಗೆ ಬೆನ್ನು ತಟ್ಟಿಕೊಳ್ಳುತ್ತಾ, “ಪಾಕಿಸ್ತಾನ ಈಗ ಜಾಗತಿಕ ಮಟ್ಟದಲ್ಲಿ ನಂಬಿಕಸ್ತ ಸಂಧಾನಕಾರನಾಗಿ ಹೊರಹೊಮ್ಮಿದೆ” ಎಂದು ಹೇಳಿಕೆ ನೀಡಿದ್ದರು.
ಇಸ್ರೇಲ್ ರಾಯಭಾರಿ ನೀಡಿದ ತಿರುಗೇಟು
ಪಾಕಿಸ್ತಾನದ ಈ ಅತಿರೇಕದ ಸಂಭ್ರಮಕ್ಕೆ ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೂವೆನ್ ಅಜಾರ್ ತಣ್ಣೀರೆರಚಿದ್ದಾರೆ. ಪಾಕಿಸ್ತಾನದ ಪಾತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅವರು ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ.
ನಂಬಿಕೆಗೆ ಅರ್ಹವಲ್ಲ: “ನಾವು ಪಾಕಿಸ್ತಾನವನ್ನು ಎಂದಿಗೂ ವಿಶ್ವಾಸಾರ್ಹ ದೇಶವೆಂದು ಪರಿಗಣಿಸುವುದಿಲ್ಲ. ಇಸ್ರೇಲ್ ದೃಷ್ಟಿಯಲ್ಲಿ ಪಾಕಿಸ್ತಾನಕ್ಕೆ ಅಂತಹ ಯಾವುದೇ ಸ್ಥಾನಮಾನವಿಲ್ಲ,” ಎಂದು ಅಜಾರ್ ನೇರವಾಗಿ ಹೇಳಿದ್ದಾರೆ.
ಅಮೆರಿಕದ ದಾಳ : ಅಮೆರಿಕ ತನ್ನ ವೈಯುಕ್ತಿಕ ಕಾರಣಗಳಿಗಾಗಿ ಪಾಕಿಸ್ತಾನವನ್ನು ಒಂದು ‘ಮೊಹರೆ’ಯನ್ನಾಗಿ (Pawn) ಬಳಸಿಕೊಳ್ಳುತ್ತಿದೆ. ಈ ಹಿಂದೆ ಹಮಾಸ್ ಜೊತೆಗಿನ ಮಾತುಕತೆಗಾಗಿ ಕತಾರ್ ಮತ್ತು ಟರ್ಕಿಯಂತಹ ಸಮಸ್ಯಾತ್ಮಕ ದೇಶಗಳನ್ನು ಅಮೆರಿಕ ಬಳಸಿಕೊಂಡಂತೆಯೇ ಈಗ ಪಾಕಿಸ್ತಾನವನ್ನು ಬಳಸಿಕೊಳ್ಳುತ್ತಿದೆ.
ಪರಿಣಾಮವೇ ಮುಖ್ಯ : ಅಮೆರಿಕ ಯಾರನ್ನು ಬೇಕಾದರೂ ಬಳಸಿಕೊಳ್ಳಲಿ, ಆದರೆ ಅಂತಿಮ ಫಲಿತಾಂಶವು ಇಸ್ರೇಲ್‌ನ ಹಿತಾಸಕ್ತಿಗೆ ಪೂರಕವಾಗಿರಬೇಕು ಎಂಬುದು ನಮ್ಮ ನಿಲುವು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದ ವಾದವೇನು?
ಬುಧವಾರ (ಏಪ್ರಿಲ್ 8) ಮಾಧ್ಯಮಗಳೊಂದಿಗೆ ಮಾತನಾಡಿದ್ದ ಖ್ವಾಜಾ ಆಸಿಫ್, “ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ನಮ್ಮ ನಾಯಕತ್ವಕ್ಕೆ ಸಂದ ಜಯ. ಅರಬ್ ರಾಷ್ಟ್ರಗಳು, ನೆರೆಯ ಇರಾನ್ ಮತ್ತು ಅಮೆರಿಕ ಈಗ ಪಾಕಿಸ್ತಾನದತ್ತ ಭರವಸೆಯಿಂದ ನೋಡುತ್ತಿವೆ. ಪಾಕಿಸ್ತಾನ ಈಗ ಹೊಸ ಯುಗಕ್ಕೆ ಕಾಲಿಟ್ಟಿದೆ,” ಎಂದು ಬಣ್ಣಿಸಿದ್ದರು.
ಒಂದು ಕಡೆ ಪಾಕಿಸ್ತಾನ ತಾನು ವಿಶ್ವಶಾಂತಿಯ ದೂತ ಎಂದು ಬಿಂಬಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಇಸ್ರೇಲ್ ನಂತಹ ದೇಶಗಳು ಪಾಕಿಸ್ತಾನದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿರುವುದು ಶಹಬಾಜ್ ಶರೀಫ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. (ಏಜೆನ್ಸಿಸ್)



