ಬೆಂಗಳೂರು: ಉಪನ್ಯಾಸಕಿಯೊಬ್ಬರು ಇತರೆ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡಿದ್ದಕ್ಕಾಗಿ ಮನನೊಂದ ವಿದ್ಯಾರ್ಥಿನಿಯೊಬ್ಬಳು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸುಭಾಷನಗರದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ದೊಡ್ಡಬಳ್ಳಾಪುರದ ಸುಭಾಷನಗರ ನಿವಾಸಿ ಎಸ್. ಗೌತಮಿ ಎಂದು ಗುರುತಿಸಲಾಗಿದೆ. ಏಪ್ರಿಲ್.4ರಂದು ಈ ಘಟನೆ ನಡದಿದ್ದು, ಮಗಳು ಚಿಕಿತ್ಸೆ ಪಡೆಯುತ್ತಿದ್ದು, ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆಂದು ಪೋಷಕರು ನಂಬಿದ್ದರು.
ಆದರೆ, ಇತ್ತೀಚೆಗೆ ಗೌತಮಿ ಇದ್ದ ರೂಮ್ ಸ್ವಚ್ಛಗೊಳಿಸಲು ಮುಂದಾದಾಗ ತಾಯಿಗೆ ಡೆತ್ ನೋಟ್ ಸಿಕ್ಕಿದೆ. ಇದರ ಬೆನ್ನಲ್ಲೇ ಪೋಷಕರು ಉಪನ್ಯಾಸಕಿಯ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಾರೆ.
ಸಾರ್ವಜನಿಕ ವಲಯದ ಕಂಪನಿಯಲ್ಲಿ ಸಹಾಯಕ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಗೌತಮಿಯ ತಂದೆ ವಿ.ಎಲ್. ಸೋಮಶೇಖರಯ್ಯ , ಏಪ್ರಿಲ್ 4 ರಂದು ಸಂಜೆ 5.15 ರ ಸುಮಾರಿಗೆ ಕಚೇರಿಯಿಂದ ಮನೆಗೆ ಹಿಂದಿರುಗಿದ ನಂತರ ಮಗಳು ಮೃತಪಟ್ಟಿರುವುದು ಕಂಡುಬಂದಿತ್ತು.ಆ ದಿನ ಗೌತಮಿ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ತಾಯಿ ಮತ್ತು ಅಕ್ಕ ತಮ್ಮ ಊರಿಗೆ ಹೋಗಿದ್ದರು. ಸೋಮಶೇಖರಯ್ಯ ಬಾಗಿಲು ತೆರೆಯಲು ಕರೆ ಮಾಡಿದಾಗ ಗೌತಮಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡ ಆಕೆಯ ತಂದೆ, ಬಾಗಿಲು ಒಡೆದು ನೋಡಿದಾಗ ಗೌತಮಿ ತನ್ನ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು, ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿತ್ತು.
ಇದೀಗ ವಿದ್ಯಾರ್ಥಿನಿ ಬರೆದಿರುವ ಡೆತ್ ನೋಟ್ ಸಿಕ್ಕಿದ್ದು, ಪತ್ರದಲ್ಲಿ ತನ್ನ ಸಾವಿಗೆ ಉಪನ್ಯಾಸಕಿ ಕಾರಣ ಎಂದು ಬರೆದಿದ್ದಾಳೆ. ಆಕೆ ತನಗೆ ಮಾನಸಿಕ ಕಿರುಕುಳ ನೀಡಿದ್ದು, ಇತರೆ ವಿದ್ಯಾರ್ಥಿಗಳ ಮುಂದೆ ಅವಮಾನ ಮಾಡುತ್ತಿದ್ದರು ಎಂದು ಆರೋಪಿಸಿದ್ದಾಳೆ. ಇದೀಗ ಯುವತಿಯ ಪೋಷಕರ ದೂರು ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.



