ರಾಮನಗರ : ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳು ತೀವ್ರಗೊಂಡಿದ್ದು, ಯೋಜನೆ ಪರ ಮತ್ತು ವಿರೋಧಿ ರೈತರ ಎರಡು ಬಣಗಳ ನಡುವೆ ಶನಿವಾರ ಭೈರಮಂಗಲ ಗ್ರಾಮದಲ್ಲಿ ವಾಗ್ವಾದ ಹಾಗೂ ನೂಕಾಟ–ತಳ್ಳಾಟ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಟೌನ್‌ಶಿಪ್ ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ನಿರಂತರ ಪ್ರತಿಭಟನೆ 486ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟಕ್ಕೆ ಬೆಂಬಲ ಸೂಚಿಸಲು ಮೈಸೂರು, ಮಂಡ್ಯ, ಬೆಳಗಾವಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಿಂದ ರೈತ ಮುಖಂಡರು ಮತ್ತು ಹೋರಾಟಗಾರರು ಭೈರಮಂಗಲಕ್ಕೆ ಆಗಮಿಸಿದ್ದರು.
ಹೊರ ಜಿಲ್ಲೆಗಳಿಂದ ಬಂದಿದ್ದ ರೈತ ಹೋರಾಟಗಾರರನ್ನು ಕಂಡ ಯೋಜನೆ ಪರ ಸ್ಥಳೀಯ ರೈತರ ಗುಂಪು, ತಮ್ಮ ಗ್ರಾಮದ ವಿಚಾರದಲ್ಲಿ ಹೊರಗಿನವರ ಹಸ್ತಕ್ಷೇಪ ಬೇಡ ಎಂದು ಆಕ್ಷೇಪ ವ್ಯಕ್ತಪಡಿಸಿತು. ಇದೇ ವೇಳೆ ಪ್ರತಿಭಟನಾಕಾರರ ವಾಹನಗಳನ್ನು ತಡೆದು ಪ್ರಶ್ನಿಸಿದ ಪರಿಣಾಮ ಎರಡೂ ಬಣಗಳ ನಡುವೆ ಮಾತಿನ ಚಕಮಕಿ ನೂಕಾಟ–ತಳ್ಳಾಟಕ್ಕೆ ತಿರುಗಿತು. ಸ್ಥಳೀಯ ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಎರಡೂ ಗುಂಪುಗಳನ್ನು ಚದುರಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಇದೇ ವೇಳೆ ಭೈರಮಂಗಲ ವೃತ್ತದಲ್ಲಿ ನಡೆದ ರೈತ ಸಮಾವೇಶದಲ್ಲಿ ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ.ಗಂಗಾಧರ್ ಹಾಗೂ ಹೊನ್ನೂರು ಪ್ರಕಾಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಟೌನ್‌ಶಿಪ್ ನಿರ್ಮಿಸುವ ಕ್ರಮವನ್ನು ಕೈಬಿಡಬೇಕು.
ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬದುಕನ್ನು ಬಲಿಕೊಡಬಾರದು. ಅಗತ್ಯವಿದ್ದರೆ ಉತ್ತರ ಕರ್ನಾಟಕದಲ್ಲಿ ಕೈಗಾರಿಕೆ ಹಾಗೂ ಟೌನ್‌ಶಿಪ್‌ಗಳನ್ನು ನಿರ್ಮಿಸಲಿ. ಆದರೆ ಕೃಷಿ ಭೂಮಿಯನ್ನು ಕಸಿದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಅವರು ಎಚ್ಚರಿಸಿದರು. ಅಲ್ಲದೆ ಪ್ರಾಣ ಹೋದರೂ ನಮ್ಮ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ರೈತರು ಘೋಷಣೆ ಕೂಗಿ ತಮ್ಮ ಹೋರಾಟ ಮುಂದುವರಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ಸಂಬಂಧಿಸಿದ ಪರ-ವಿರೋಧದ ಸಂಘರ್ಷ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.



