ಮೃತ ಪಟ್ಟ ಕುಟುಂಬಸ್ಥರಿಗೆ 50 ಸಾವಿರ ಪರಿಹಾರ ಪ್ರಕಟಿಸಿದ ಶಾಸಕ ಡಿ.ರವಿಶಂಕರ್
ಕೆ.ಆರ್.ನಗರ : ಕಾವೇರಿ ನದಿಯಲ್ಲಿ ಈಜಲು ಹೋದ 6 ಮಂದಿ ಮೃತ ಪಟ್ಟಿರುವ ದುರ್ಘಟನೆ ಪಟ್ಟಣ ಸಮೀಪದ ಹಳೇ ಎಡತೊರೆ ಪಂಪ್ ಹೌಸ್ ಬಳಿ ನಡೆದಿದೆ. ಇಲ್ಲಿನ ಹಳೇ ಎಡತೊರೆ ಬಳಿ ಇರುವ ಕಾವೇರಿ ನದಿ ದಂಡೆಯ ದರ್ಗಾದಲ್ಲಿ ನಡೆಯುತ್ತಿದ್ದ ಉರುಸ್ ಕಾರ್ಯಕ್ರಮಕ್ಕೆ ಬಂದಿದ್ದ 8 ಮಂದಿ ನದಿಗೆ ಸ್ನಾನ ಮಾಡಲು ಇಳಿದಾಗ ಈ ಘೋರ ದುರಂತ ನಡೆದಿದೆ.
ಮೈಸೂರು ಉದಯಗಿರಿ ನಿವಾಸಿಗಳಾದ ಫಾತೀಮ (42), ಉಜೇರ್ (5), ಬೆಂಗಳೂರು ಬಿಎಸ್ ಆರ್ ಲೇಔಟ್ ನಿವಾಸಿಗಳಾದ ಮೊಹಮದ್ ಯಾಸೀನ್ (23), ನೇಹಾ ಕೌಸರ್ (19), ಬೆಂಗಳೂರು ಕಡಾಗೌಡನಹಳ್ಳಿ ನಿವಾಸಿ ಐಮಾನ್ ಮತ್ತು ಕೆ.ಆರ್.ನಗರ ಪಟ್ಟಣದ ಮುಸ್ಲಿಂ ಬಡಾವಣೆಯ ನಿವಾಸಿ ಅಫೀಪ್ ಮೊಹಮದ್ (13), ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ನದಿಯಲ್ಲಿ ಮುಳುಗುತ್ತಿದ್ದ ಮತ್ತಿಬ್ಬರನ್ನು ಸ್ಥಳಿಯರು ರಕ್ಷಣೆ ಮಾಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆ ಗೆ ದಾಖಲಿಸಲಾಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಕೆ.ಆರ್.ನಗರ ಪೋಲಿಸರು ಎಲ್ಲಾ 8 ಮಂದಿಯನ್ನು ಪಟ್ಟಣದ ಸಂವೃದ್ದಿ ಆಸ್ಪತ್ರೆ ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದಾದರೂ ಅಷ್ಟರಲ್ಲಾಗಲೇ 6 ಮಂದಿ ಮೃತ ಪಟ್ಟಿದ್ದರಲ್ಲದೆ ಇಬ್ಬರು ತೀವ್ರ ನಿತ್ರಾಣರಾಗಿದ್ದರು.
ಆನಂತರ ಮೃತ ದೇಹಗಳ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಗಿಲು ಮುಟ್ಟಿದ ಆಕ್ರಂದನ : ಕೆ.ಆರ್.ನಗರ ಪಟ್ಟಣದ ಸಾರ್ವಜನಿಕ ಶವಗಾರದ ಬಳಿ ಮೃತ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತಲ್ಲದೆ ಸಂವೃದ್ದಿ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಸಾವಿರಾರು ಮಂದಿ ನದಿಯಲ್ಲಿ ಮುಳುಗಿ ಮೃತ ಪಟ್ಟವರಿಗೆ ಮರುಕ ವ್ಯಕ್ತಪಡಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಸಾ.ರಾ.ಮಹೇಶ್, ತಹಶೀಲ್ದಾರ್ .ಸುರೇಂದ್ರಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ ಪಿ ರಾಜಣ್ಣ, ಪೊಲೀಸ್ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ಮತ್ತಿತರು ಭೇಟಿ ನೀಡಿದರು.
ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ಪ್ರಕಟಿಸಿದ ಶಾಸಕ ಡಿ.ರವಿಶಂಕರ್
ಕಾವೇರಿ ನದಿಯಲ್ಲಿ ಈಜಲು ಹೋಗಿ ಮೃತಪಟ್ಟ 6 ಮಂದಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಶಾಸಕ ಡಿ.ರವಿಶಂಕರ್ ಪ್ರಕಟಿಸಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶವಗಾರಕ್ಕೆ ಭೇಟಿ ನೀಡಿ ಘಟನೆಯಲ್ಲಿ ಮೃತ ಪಟ್ಟ ಕುಟುಂಬದವರಿಗೆ ಸಾಂತ್ವಾನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಯ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ನಂತರ ವಿಷಾದ ವ್ಯಕ್ತಪಡಿಸಿರುವ ಅವರು ಪರಿಹಾರವನ್ನು ಘೋಷಿಸಿದ್ದಾರೆ ಎಂದರು.ಸರ್ಕಾರದ ಪರಿಹಾರದೊಂದಿಗೆ ನಾನು ಕೂಡ ವೈಯಕ್ತಿಕವಾಗಿ ಮೃತ ಪಟ್ಟ ಕುಟುಂಬಸ್ಥರಿಗೆ 50 ಸಾವಿರ ನೀಡುವುದಾಗಿ ಪ್ರಕಟಿಸಿದರು. ನಮ್ಮ ಕ್ಷೇತ್ರದ ವ್ಯಾಪ್ತಿಯ ಕಾವೇರಿ ನದಿಯಲ್ಲಿ ಮುಳುಗಿ 6 ಮಂದಿ ಮೃತ ಪಟ್ಟಿರುವುದು ಅತ್ಯಂತ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದ ಅವರು ಮೃತರ ಆತ್ಮಕ್ಕೆ ಶಾಂತಿ ಕೋರುವುದರ ಜತೆಗೆ ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು. ಇದರ ಜತೆಗೆ ಮೃತರ ಶವಗಳನ್ನು ಅವರ ಹುಟ್ಟೂರಿಗೆ ಸಾಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ಘೋಷಿಸಿದ ಶಾಸಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರ್ಕಾರದಿಂದ ವೆಚ್ಚ ಭರಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಸಾ.ರಾ.ಮಹೇಶ್ ತಲಾ 50 ಸಾವಿರ ರೂ ವೈಯಕ್ತಿಕ ಪರಿಹಾರ
ಕಾವೇರಿ ನದಿಯಲ್ಲಿ ಈಜಲು ಹೋಗಿ ಮೃತ ಪಟ್ಟ 6 ಮಂದಿಯ ಕುಟುಂಬಸ್ಥರಿಗೆ ಮಾಜಿ ಸಚಿವ ಸಾ.ರಾ.ಮಹೇಶ್ ತಲಾ 50 ಸಾವಿರ ರೂ ವೈಯಕ್ತಿಕ ಪರಿಹಾರ ನೀಡಿದರು.
ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವಾನ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತಿಬ್ಬರು ಶೀಘ್ರ ಗುಣಮುಖರಾಗಲಿ ಎಂದು ಆರೈಸಿದರು.
ವೈಯಕ್ತಿಕ ಪರಿಹಾರದ ಜತೆಗೆ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತನಾಡಿ ಕೇಂದ್ರದಿಂದಲೂ ಪರಿಹಾರ ಕೊಡಿಸುವ ಭರವಸೆಯನ್ನು ಮಾಜಿ ಸಚಿವರು ನೀಡಿದರು.



