ಬೆಂಗಳೂರು: ಎಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶುವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಂಪೂರ್ಣ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. 2026ನೇ ಸಾಲಿನ ಸಿಇಟಿ ಪರೀಕ್ಷೆಗಳು ಏಪ್ರಿಲ್ 23 ಮತ್ತು 24ರಂದು ನಡೆಯಲಿದ್ದು, ಈ ಬಾರಿ ಪರೀಕ್ಷೆಯ ಪಾರದರ್ಶಕತೆ ಹಾಗೂ ಅಕ್ರಮ ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಲಾಗಿದೆ.
ಈ ವರ್ಷ ಒಟ್ಟು 3,30,479 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,44,380 ಮಂದಿ ಹುಡುಗರು, 1,86,099 ಮಂದಿ ಹುಡುಗಿಯರು ಹಾಗೂ 970 ಮಂದಿ ವಿಶೇಷ ಚೇತನರು ಸೇರಿದ್ದಾರೆ. ರಾಜ್ಯದಾದ್ಯಂತ 745 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಪ್ರತಿಯೊಂದು ಕೇಂದ್ರದಲ್ಲೂ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಉಪ ಮುಖ್ಯ ಅಧೀಕ್ಷಕರು 745, ವಸ್ತ್ರ ಸಂಹಿತಾಧಿಕಾರಿಗಳು 745, ಪರೀಕ್ಷಾ ಸಿಬ್ಬಂದಿ 12,665, ಕೊಠಡಿ ಮೇಲ್ವಿಚಾರಕರು 13,770, ಫ್ರಿಸ್ಕಿಂಗ್ ದಳ 3,304 ಹಾಗೂ ಮುಖ ಚಹರೆ ಪರಿಶೀಲನಾ ದಳ 3,304 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜೊತೆಗೆ 15,265 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ.
ಹೊರನಾಡು ಹಾಗೂ ಗಡಿನಾಡು ಕನ್ನಡಿಗರಿಗಾಗಿ ಏಪ್ರಿಲ್ 22ರಂದು ಕನ್ನಡ ಭಾಷಾ ಪರೀಕ್ಷೆ ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳಲ್ಲಿ ಐದು ಕೇಂದ್ರಗಳಲ್ಲಿ ನಡೆಯಲಿದೆ. ಏಪ್ರಿಲ್ 23ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ, ಏಪ್ರಿಲ್ 24ರಂದು ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಎಲ್ಲಾ ಕೇಂದ್ರಗಳ ಮೇಲ್ವಿಚಾರಣೆಗೆ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮೇಲ್ವಿಚಾರಣೆ ವಹಿಸಲಿದ್ದಾರೆ.
ಬೆಂಗಳೂರಿನಲ್ಲೇ ಅತಿ ಹೆಚ್ಚು, ಅಂದರೆ 163 ಕೇಂದ್ರಗಳಲ್ಲಿ 77,604 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರ ನಿಯಂತ್ರಣಕ್ಕಾಗಿ ಕೆಇಎ ಕಚೇರಿಯಲ್ಲಿ ವಿಶೇಷ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಶ್ರವಣ ಸಾಧನ ಬಳಸುವವರು ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಜಾಮರ್‌ಗಳನ್ನು ಅಳವಡಿಸಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ಕೇಂದ್ರ ಪ್ರವೇಶಕ್ಕೂ ಮುನ್ನ ಅಭ್ಯರ್ಥಿಗಳಿಗೆ ತೀವ್ರ ತಪಾಸಣೆ ನಡೆಯಲಿದ್ದು, ಕನಿಷ್ಠ ಎರಡು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಆಗಮಿಸುವುದು ಕಡ್ಡಾಯವಾಗಿದೆ. ಮುಖ ಚಹರೆ ಗುರುತಿಸುವ ವ್ಯವಸ್ಥೆ ಹಾಗೂ ಕ್ಯೂಆರ್ ಕೋಡ್ ತಂತ್ರಜ್ಞಾನ ಬಳಸಿಕೊಂಡು ಅಭ್ಯರ್ಥಿಗಳ ನೈಜತೆ ಪರಿಶೀಲಿಸಲಾಗುತ್ತದೆ. ಇದರಿಂದ ನಕಲಿ ಅಭ್ಯರ್ಥಿಗಳ ಪ್ರವೇಶಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದೆ.
ವಸ್ತ್ರ ಸಂಹಿತೆಯಲ್ಲಿಯೂ ಕಠಿಣ ನಿಯಮ ಜಾರಿಯಾಗಿದೆ. ಅರ್ಧ ತೋಳಿನ ಉಡುಪು, ಸರಳ ಪ್ಯಾಂಟ್ ಧರಿಸಬೇಕು. ಶೂ, ಮೊಬೈಲ್, ಬ್ಲೂಟೂತ್, ಇಯರ್‌ಫೋನ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ಓಎಂಆರ್ ಶೀಟ್‌ನಲ್ಲಿ ತಮ್ಮ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಬೇಕು ಎಂದು ಕೆಇಎ ಸೂಚಿಸಿದೆ.
ಪರೀಕ್ಷೆಗೆ ಹಾಜರಾಗುವವರು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು, ನೀಡಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಭ್ಯಾಸಕ್ಕಾಗಿ ಕರಡು ಓಎಂಆರ್ ಶೀಟ್ ಸಹ ನೀಡಲಾಗಿದ್ದು, ವಿದ್ಯಾರ್ಥಿಗಳು ಅದನ್ನು ಬಳಸಿಕೊಳ್ಳಬಹುದು. ಒಟ್ಟಿನಲ್ಲಿ, ಈ ವರ್ಷದ ಸಿಇಟಿ ಪರೀಕ್ಷೆಯನ್ನು ಪಾರದರ್ಶಕವಾಗಿ ಹಾಗೂ ಅಕ್ರಮರಹಿತವಾಗಿ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೆಇಎ ಮಾಡಿಕೊಂಡಿದೆ.



