ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದ 133ನೇ ಸಂಚಿಕೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ಬಗ್ಗೆ ವಿಶೇಷವಾಗಿ ಮಾತನಾಡಿದರು. ಗುಜರಾತ್‌ನ ಕಚ್ ಜಿಲ್ಲೆಯ ಫ್ಲೆಮಿಂಗೋ (ರಾಜಹಂಸ) ಪಕ್ಷಿಗಳ ಸಂರಕ್ಷಣೆ ಮತ್ತು ಈಶಾನ್ಯ ಭಾರತದ ಸಾಧನೆಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಚ್ ನ ‘ಫ್ಲೆಮಿಂಗೋ ಸಿಟಿ’ ಮತ್ತು ಸಂಪ್ರದಾಯ
ಪ್ರಧಾನಮಂತ್ರಿಯವರು ಕಚ್‌ನ ರಣ್ ಪ್ರದೇಶದ ಸೌಂದರ್ಯವನ್ನು ವಿವರಿಸುತ್ತಾ “ಮಳೆಗಾಲ ಮುಗಿಯುತ್ತಿದ್ದಂತೆಯೇ ಕಚ್ ನ ರಣ್ ಭೂಮಿ ಜೀವಂತವಾಗುತ್ತದೆ. ಪ್ರತಿ ವರ್ಷ ಲಕ್ಷಾಂತರ ಫ್ಲೆಮಿಂಗೋ ಪಕ್ಷಿಗಳು ಇಲ್ಲಿಗೆ ಬರುತ್ತವೆ. ಇಡೀ ಪ್ರದೇಶವು ಗುಲಾಬಿ ಬಣ್ಣದಿಂದ ಕಂಗೊಳಿಸುವುದರಿಂದ ಇದನ್ನು ‘ಫ್ಲೆಮಿಂಗೋ ಸಿಟಿ’ ಎಂದು ಕರೆಯಲಾಗುತ್ತದೆ. ಈ ಪಕ್ಷಿಗಳು ಇಲ್ಲೇ ಗೂಡು ಕಟ್ಟಿ ತಮ್ಮ ಮರಿಗಳನ್ನು ಬೆಳೆಸುತ್ತವೆ.” ಕಚ್ ನ ಜನರು ಈ ಪಕ್ಷಿಗಳನ್ನು ಅತ್ಯಂತ ಪ್ರೀತಿಯಿಂದ ‘ಲಾಖಾ ಜೀ ಕೆ ಬರಾತಿ’ ಅಂದರೆ ಲಾಖಾ ಜೀಯವರ ಮದುವೆ ದಿಬ್ಬಣದವರು ಎಂದು ಕರೆಯುತ್ತಾರೆ. ಇಂದು ಈ ಪಕ್ಷಿಗಳು ಪರಿಸರ ಸಂರಕ್ಷಣೆಯ ಸುಂದರ ಸಂಕೇತವಾಗಿ ಹೊರಹೊಮ್ಮಿವೆ ಎಂದು ಮೋದಿ ಶ್ಲಾಘಿಸಿದರು.
ಈಶಾನ್ಯ ಭಾರತ : ಬಿದಿರು ಕ್ಷೇತ್ರದಲ್ಲಿ ನವೋದ್ಯಮದ ಕ್ರಾಂತಿ
ಈಶಾನ್ಯ ಭಾರತವನ್ನು ‘ಅಷ್ಟಲಕ್ಷ್ಮಿ’ ಎಂದು ಬಣ್ಣಿಸಿದ ಪ್ರಧಾನಿ, ಅಲ್ಲಿನ ಪ್ರಾಕೃತಿಕ ಸೌಂದರ್ಯ ಮತ್ತು ಪ್ರತಿಭೆಯನ್ನು ಕೊಂಡಾಡಿದರು. ಒಂದು ಕಾಲದಲ್ಲಿ ಹೊರೆ ಎಂದು ಭಾವಿಸಲಾಗಿದ್ದ ಬಿದಿರು (Bamboo) ಇಂದು ಉದ್ಯೋಗ, ವ್ಯಾಪಾರ ಮತ್ತು ನಾವೀನ್ಯತೆಗೆ ಹೊಸ ವೇಗ ನೀಡುತ್ತಿದೆ. ಈ ಬಿದಿರು ಕ್ರಾಂತಿಯಿಂದ ಈ ಭಾಗದ ತಾಯಂದಿರು ಮತ್ತು ಸಹೋದರಿಯರು ಅತಿ ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ವನ್ಯಜೀವಿ ಸಂರಕ್ಷಣೆ : ಕೃಷ್ಣಮೃಗ ಮತ್ತು ಗಜ ಮಿತ್ರ
ದೇಶದ ಇತರ ಭಾಗಗಳ ಯಶೋಗಾಥೆಗಳನ್ನು ಹಂಚಿಕೊಂಡ ಪಿಎಂ ಮೋದಿ ಅಳಿವಿನ ಅಂಚಿನಲ್ಲಿದ್ದ ಕೃಷ್ಣಮೃಗಗಳ ಸಂಖ್ಯೆ ನಿರಂತರ ಪ್ರಯತ್ನಗಳಿಂದಾಗಿ ಮತ್ತೆ ಹೆಚ್ಚಾಗುತ್ತಿರುವುದು ಸಂತಸದ ವಿಷಯ ಎಂದರು.
ತರೈ ಪ್ರದೇಶದಲ್ಲಿ ಬೆಳೆ ಕಟಾವಿನ ಸಮಯದಲ್ಲಿ ಆನೆಗಳು ಮತ್ತು ಮಾನವರ ನಡುವಿನ ಸಂಘರ್ಷವನ್ನು ತಪ್ಪಿಸಲು ಪ್ರಾರಂಭಿಸಲಾದ “ಗಜ ಮಿತ್ರ” ಎಂಬ ಅಭಿಯಾನವನ್ನು ಅವರು ಉಲ್ಲೇಖಿಸಿದರು. ಇದು ಮಾನವ ಮತ್ತು ವನ್ಯಜೀವಿಗಳ ನಡುವಿನ ಸಹಕಾರಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದರು. (ಏಜೆನ್ಸಿಸ್)



