ಬೆಂಗಳೂರು: ನಗರದ ಪ್ರತಿಷ್ಠಿತ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುವ ದಿನದಂದು ಕ್ರೀಡಾಂಗಣದ ಪ್ರಮುಖ ಸಿಸಿಟಿವಿ ಕ್ಯಾಮೆರಾಗಳ ಕೇಬಲ್ಗಳನ್ನು ಕತ್ತರಿಸಿ, ಇಡೀ ಭದ್ರತಾ ಜಾಲವನ್ನೇ ಅಸ್ತವ್ಯಸ್ತಗೊಳಿಸಲು ಯತ್ನಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಏಪ್ರಿಲ್ 24 ರಂದು ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ಮಧ್ಯೆ ಐಪಿಎಲ್ ಪಂದ್ಯ ಆಯೋಜನೆಯಾಗಿತ್ತು. ಪಂದ್ಯ ನಡೆಯುವ ದಿನದಂದು ಬೆಳಿಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡವು ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಆಫ್ಲೈನ್ ಆಗಿರುವುದು ಪತ್ತೆಯಾಗಿದೆ.
ಕ್ಯಾಮೆರಾಗಳು ಏಕಾಏಕಿ ಬಂದ್ ಆಗಿದ್ದರಿಂದ ತಾಂತ್ರಿಕ ತಂಡವು ತಕ್ಷಣವೇ ಕೂಲಂಕಷವಾಗಿ ತನಿಖೆ ನಡೆಸಿದೆ. ಈ ವೇಳೆ ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ ಎಂಬ ಉಪ-ವಿತರಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಇ. ಮತ್ತು ಅಬ್ದುಲ್ ಕಲಾಂ ಈ ಕೃತ್ಯದಲ್ಲಿ ಭಾಗಿಯಾಗಿರುಬುದು ಬೆಳಕಿಗೆ ಬಂದಿದೆ. ಈ ಆರೋಪಿಗಳು ಕ್ರೀಡಾಂಗಣವನ್ನು ಪ್ರವೇಶಿಸಲು ಅಗತ್ಯವಾದ ಮಾನ್ಯ ಪಾಸ್ಗಳನ್ನು ಹೊಂದಿರಲಿಲ್ಲ. ಆದರೂ ಇಬ್ಬರು ಬೆಳಿಗ್ಗೆ 11:30ರ ಸುಮಾರಿಗೆ ನಿಷ್ಕ್ರಿಯಗೊಂಡ ಹಳೆಯ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದರು
ಕ್ರೀಡಾಂಗಣವನ್ನು ಪ್ರವೇಶಿಸಿದ ಆರೋಪಿಗಳು, ಎನ್ವಿಆರ್ ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಉದ್ದೇಶಪೂರ್ವಕವಾಗಿ ತಪ್ಪು ತಪ್ಪಾಗಿ ನಿರ್ವಹಿಸಿ ಅವುಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ. ಇದರಿಂದಾಗಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಂಡಿತ್ತು. ಈ ಹಿಂದೆ ಭದ್ರತೆಗಾಗಿ ಮಾಡಲಾಗಿದ್ದ ಎಲ್ಲಾ ಪ್ರಮುಖ ಆರಂಭಿಕ ತಾಂತ್ರಿಕ ಕೆಲಸಗಳನ್ನು ಇವರು ಹಾಳು ಮಾಡಿದ್ದರು. ಆರೋಪಿಗಳು ಸರಿಯಾದ ಅನುಮತಿ ಇಲ್ಲದೆಯೇ ಕ್ರೀಡಾಂಗಣದ ಅತ್ಯಂತ ಸೂಕ್ಷ್ಮ ಪ್ರದೇಶವಾದ ಸಿಸಿಟಿವಿ ನಿಯಂತ್ರಣ ಕೊಠಡಿಯನ್ನು ಪ್ರವೇಶಿಸಿರುವುದು ಮತ್ತು ನಂತರ ಪಾರ್ಕಿಂಗ್ ಪ್ರದೇಶದ ಬಳಿ ಇರುವ ಕನೆಕ್ಷನ್ ಬಾಕ್ಸ್ ಕಡೆಗೆ ಚಲಿಸುತ್ತಿರುವ ದೃಶ್ಯಗಳು ಲಭ್ಯವಿದೆ.
ಆರೋಪಿಗಳ ಈ ಕೃತ್ಯದಿಂದಾಗಿ ಕ್ರೀಡಾಂಗಣದ ಅತ್ಯಂತ ಪ್ರಮುಖ ಭದ್ರತಾ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದವು. ಅವುಗಳಲ್ಲಿ ಪ್ರಮುಖವಾಗಿ ಎಲ್ಲಾ ಪ್ರವೇಶ ದ್ವಾರಗಳು, ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು, ಕಾರ್ಪೊರೇಟ್ ಸ್ಟ್ಯಾಂಡ್ ಕ್ಯಾಮೆರಾ ಬಂದ್ ಆಗಿತ್ತು. ಈ ಪ್ರಮುಖ ಸ್ಥಳಗಳ ಕ್ಯಾಮೆರಾಗಳು ಬಂದ್ ಆಗಿದ್ದರಿಂದ ಪಂದ್ಯದ ಸಂದರ್ಭದಲ್ಲಿ ಭದ್ರತಾ ಮೇಲ್ವಿಚಾರಣೆ ನಡೆಸಲು ಪೊಲೀಸರಿಗೆ ಅಗತ್ಯವಾದ ದತ್ತಾಂಶ ಅಥವಾ ಫೀಡ್ಗಳನ್ನು ಒದಗಿಸಲು ದೂರುದಾರರಿಗೆ ಸಾಧ್ಯವಾಗಲಿಲ್ಲ.
ಈ ಉದ್ದೇಶಪೂರ್ವಕ ಮತ್ತು ವಿಧ್ವಂಸಕ ಕೃತ್ಯದ ಬಗ್ಗೆ STAQU ಟೆಕ್ನಾಲಜಿಸ್ನ ಆದಿತ್ಯ ಭಟ್ ಕಬ್ಬನ್ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ಇ. ಮತ್ತು ಅಬ್ದುಲ್ ಕಲಾಂ ವಿರುದ್ಧ ದೂರು ನೀಡಿದ್ದಾರೆ. ಈ ಘಟನೆಯು ಕ್ರೀಡಾಂಗಣದ ಮತ್ತು ಐಪಿಎಲ್ ಪಂದ್ಯದ ಭದ್ರತೆಯ ಮೇಲೆ ಗಂಭೀರವಾದ ಆತಂಕವನ್ನು ಮೂಡಿಸಿದೆ. ಆದ್ದರಿಂದ ಈ ಪ್ರಕರಣದ ಬಗ್ಗೆ ತಕ್ಷಣ ಗಮನಹರಿಸಿ, ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ ಮತ್ತು ಸಂಬಂಧಿತ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.



