Thursday, June 11, 2026
Google search engine

Homeರಾಜಕೀಯಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟರಂತೆ ಮಾತನಾಡುತ್ತಿದ್ದಾರೆ: ಡಿಕೆ ಶಿವಕುಮಾರ್ ತಿರುಗೇಟು

ಅಶೋಕ್ ಕಸ ಮಾಫಿಯಾ ಗ್ಯಾಂಗಿನ ಏಜೆಂಟರಂತೆ ಮಾತನಾಡುತ್ತಿದ್ದಾರೆ: ಡಿಕೆ ಶಿವಕುಮಾರ್ ತಿರುಗೇಟು

ಹೊಸದಿಲ್ಲಿ: ಬೆಂಗಳೂರು ಕಸ ವಿಲೇವಾರಿ ಟೆಂಡರ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಕಿಕ್‌ಬ್ಯಾಕ್ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀವ್ರ ಪ್ರತಿಕ್ರಿಯೆ ನೀಡಿದ್ದು, “ಅವರು ಕಸ ಮಾಫಿಯಾ ಗ್ಯಾಂಗಿನ ಏಜೆಂಟರಂತೆ ಮಾತನಾಡುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.

ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಪ್ರಭಾವಿ ಕಸ ಲಾಬಿ ಕಾರ್ಯನಿರ್ವಹಿಸುತ್ತಿದ್ದು, ಅದನ್ನು ನಿಯಂತ್ರಿಸುವ ಬಗ್ಗೆ ಈ ಹಿಂದೆ ಅಶೋಕ್ ಅವರೊಂದಿಗೆ ಚರ್ಚೆ ನಡೆಸಿದ್ದಾಗಿ ಹೇಳಿದರು. ಆದರೆ ಈಗ ಅದೇ ಮಾಫಿಯಾದ ಪರವಾಗಿ ಅವರು ಮಾತನಾಡುತ್ತಿರುವುದು ಆಶ್ಚರ್ಯಕರ ಸಂಗತಿ ಎಂದು ಟೀಕಿಸಿದರು.

ಕಸದ ಟೆಂಡರ್‌ನಲ್ಲಿ 10 ಸಾವಿರ ಕೋಟಿ ರೂ. ಕಿಕ್‌ಬ್ಯಾಕ್ ಪಡೆದಿದ್ದಾರೆ ಎಂಬ ಆರೋಪವನ್ನು ತಳ್ಳಿ ಹಾಕಿದ ಶಿವಕುಮಾರ್, “ಅವರಿಗೆ ಬೇಕಾದಷ್ಟು ಕಸವನ್ನು ಲಾರಿಯಲ್ಲಿ ತುಂಬಿ ಕಳುಹಿಸಿಕೊಡೋಣ. ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಕೂಡ ಇದೇ ರೀತಿಯ ಆರೋಪ ಮಾಡಿದ್ದರು. ಆದರೆ ಅವರ ಆಡಳಿತಾವಧಿಯಲ್ಲಿ ಯಾಕೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗಲಿಲ್ಲ?” ಎಂದು ಪ್ರಶ್ನಿಸಿದರು.

ಕಸದಿಂದ ಇಂಧನ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಗಳ ಬಗ್ಗೆ ಅಧ್ಯಯನ ನಡೆಸಲು ದೆಹಲಿ, ಹೈದರಾಬಾದ್ ಹಾಗೂ ಚೆನ್ನೈ ನಗರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಅವರು ತಿಳಿಸಿದರು. ಹಿಂದೆ 14-15 ಕಂಪನಿಗಳಿಗೆ ಅವಕಾಶ ನೀಡಿದ್ದರೂ ಯಾವುದೇ ಯೋಜನೆ ಯಶಸ್ವಿಯಾಗಿರಲಿಲ್ಲ ಎಂದರು.

ಪ್ರಸ್ತುತ ಕಸ ವಿಲೇವಾರಿ ಯೋಜನೆಗಾಗಿ ಸುಮಾರು 6 ಸಾವಿರ ಕೋಟಿ ರೂ. ಹೂಡಿಕೆ ಮಾಡಲಾಗುತ್ತಿದ್ದು, ಅಗತ್ಯ ಭೂಮಿ ದೊರೆಯದ ಕಾರಣ ದೊಡ್ಡಬಳ್ಳಾಪುರದಲ್ಲಿ ಜಾಗ ಖರೀದಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು. ನೈಸ್ ಸಂಸ್ಥೆ ಬಿಟ್ಟಿರುವ ಜಾಗವನ್ನೂ ಬಳಸಿಕೊಳ್ಳಲಾಗುತ್ತಿದ್ದು, ಬೇರೆಡೆ ಸೂಕ್ತ ಭೂಮಿ ನೀಡಲು ಯಾರಾದರೂ ಮುಂದೆ ಬಂದರೆ ಸ್ವಾಗತಿಸುವುದಾಗಿ ಹೇಳಿದರು.

“ಯಾವ ತನಿಖೆ ಬೇಕಾದರೂ ಮಾಡಿಸಲಿ. 36 ಸಾವಿರ ಕೋಟಿ ಅಲ್ಲ, 10 ಕೋಟಿ ರೂಪಾಯಿ ದುರ್ಬಳಕೆ ಆಗಿದೆ ಎಂದು ಸಾಬೀತಾದರೂ ತನಿಖೆ ಎದುರಿಸಲು ನಾನು ಸಿದ್ಧ” ಎಂದು ಸವಾಲು ಹಾಕಿದರು. ಕೋರ್ಟ್ ಕೂಡ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದ್ದು, ನಂತರವೂ ಪಾರದರ್ಶಕತೆಗಾಗಿ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

ತಮ್ಮ ವಿರುದ್ಧ ನಡೆಯುತ್ತಿರುವ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿದ ಸಿಎಂ, “ನಾನು ಮುಖ್ಯಮಂತ್ರಿಯಾಗಿರುವುದನ್ನು ಕೆಲವರಿಗೆ ಸಹಿಸಲಾಗುತ್ತಿಲ್ಲ. ಅಸೂಯೆ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಸರ್ಕಾರದ ಕಾರ್ಯವೈಖರಿ ಮತ್ತು ಪಾರದರ್ಶಕತೆ ಅವರಿಗೆ ಅಸಹ್ಯವಾಗಿದೆ” ಎಂದು ಹೇಳಿದರು.

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರುಗಳ ಭೇಟಿಯ ಕುರಿತು ಮಾತನಾಡಿದ ಅವರು, ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ರಾಜಧಾನಿಗೆ ಬಂದಿರುವುದಾಗಿ ತಿಳಿಸಿದರು. ಈ ವೇಳೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಕಚೇರಿಗೂ ಭೇಟಿ ನೀಡಿರುವುದಾಗಿ ಹೇಳಿದರು.

ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೆಡೆ ಮೃತ ಫಲಾನುಭವಿಗಳ ಹೆಸರಿನಲ್ಲಿ ಹಣ ಪಡೆಯುತ್ತಿರುವುದು ಹಾಗೂ ಅನರ್ಹರು ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಯುತ್ತಿದೆ ಎಂದರು. ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪಿಸುವುದೇ ಸರ್ಕಾರದ ಉದ್ದೇಶವಾಗಿದ್ದು, ಯಾವುದೇ ರೀತಿಯಲ್ಲಿ ಯೋಜನೆ ಕಡಿತಗೊಳಿಸುವ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯದ ಮತದಾರರು ಹಾಗೂ ಅರ್ಹ ಕುಟುಂಬಗಳಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

RELATED ARTICLES
- Advertisment -
Google search engine

Most Popular