Monday, May 4, 2026
Google search engine

Homeಕಾಡು-ಮೇಡುತಣ್ಣಗಾದ ಕಾಡು ಬೆಂಕಿ ಭೀತಿ : ಬಂಡೀಪುರದಲ್ಲಿ ಮಳೆಯ ಸಿಂಚನ, ಹಸಿರು ಹಬ್ಬ

ತಣ್ಣಗಾದ ಕಾಡು ಬೆಂಕಿ ಭೀತಿ : ಬಂಡೀಪುರದಲ್ಲಿ ಮಳೆಯ ಸಿಂಚನ, ಹಸಿರು ಹಬ್ಬ

ಚಾಮರಾಜನಗರ : ಸಾಮಾನ್ಯವಾಗಿ ಬೇಸಿಗೆ ಬಂತು ಎಂದರೆ ಕಾಡು ಬೆಂಕಿಯ ಭೀತಿ ಕಾಡುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಈ ವರ್ಷ ಮಾತ್ರ ವಿಭಿನ್ನ ದೃಶ್ಯ ನೀಡುತ್ತಿದೆ. ಅರಣ್ಯ ಇಲಾಖೆಯ ಕಟ್ಟುನಿಟ್ಟಿನ ಕ್ರಮಗಳು ಹಾಗೂ ವರುಣನ ಕೃಪೆಯಿಂದಾಗಿ ಈ ಬಾರಿ ಬೆಂಕಿ ಬೀಳುವ ಆತಂಕ ಬಹುತೇಕ ದೂರವಾಗಿದ್ದು, ಕಾಡಿನೆಲ್ಲೆಡೆ ಹಸಿರು ಮೆರಗು ಕಾಣಿಸುತ್ತಿದೆ.

1080 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಬಂಡೀಪುರದಲ್ಲಿ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ, ಕರಡಿ ಸೇರಿದಂತೆ ಅನೇಕ ವನ್ಯಜೀವಿಗಳು ವಾಸಿಸುತ್ತಿವೆ. ಪ್ರತೀ ವರ್ಷ ಬೇಸಿಗೆಯಲ್ಲಿ ಬೆಂಕಿ ತಡೆಯುವುದು ಅರಣ್ಯಾಧಿಕಾರಿಗಳಿಗೆ ದೊಡ್ಡ ಸವಾಲಾಗಿರುತ್ತದೆ. ಆಕಸ್ಮಿಕ ಘಟನೆಗಳ ಜೊತೆಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚುವ ಅಪಾಯವೂ ಇರುತ್ತದೆ. ಒಮ್ಮೆ ಬೆಂಕಿ ಹೊತ್ತಿಕೊಂಡರೆ ನೂರಾರು ಎಕರೆ ಅರಣ್ಯ ಭಸ್ಮವಾಗುವ ಸಂಭವ ಇದೆ.

ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುಂಚಿತ ಕ್ರಮಗಳನ್ನು ಕೈಗೊಂಡಿದೆ. ಕಾಡಂಚಿನ ಸುಮಾರು 475 ಮಂದಿಯನ್ನು ಫೈರ್ ವಾಚರ್‌ಗಳಾಗಿ ನೇಮಕ ಮಾಡಲಾಗಿದ್ದು, ಸುಮಾರು 2800 ಕಿಲೋಮೀಟರ್ ಉದ್ದದ ಬೆಂಕಿ ರೇಖೆ (ಫೈರ್ ಲೈನ್) ನಿರ್ಮಿಸಲಾಗಿದೆ. ಜೊತೆಗೆ ಥರ್ಮಲ್ ಡ್ರೋನ್‌ಗಳು, ಇ-ಗಸ್ತು ವ್ಯವಸ್ಥೆ ಹಾಗೂ ವಾಚ್ ಟವರ್‌ಗಳ ಮೂಲಕ 24 ಗಂಟೆಗಳ ನಿಗಾ ವಹಿಸಲಾಗುತ್ತಿದೆ.

ಅರಣ್ಯ ಸಿಬ್ಬಂದಿಯ ಈ ನಿರಂತರ ಶ್ರಮಕ್ಕೆ ಈ ಬಾರಿ ಮಳೆ ಕೂಡ ಸಾಥ್ ನೀಡಿದೆ. ಏಪ್ರಿಲ್ ತಿಂಗಳಲ್ಲಿ ಹಲವು ಬಾರಿ ಸುರಿದ ಮಳೆಯಿಂದಾಗಿ ಒಣಗಿದ್ದ ಕಾಡಿನಲ್ಲಿ ಮತ್ತೆ ಹಸಿರು ಚಿಗುರೊಡೆಯಲು ಆರಂಭವಾಗಿದೆ. ಬೆಟ್ಟಗುಡ್ಡಗಳೆಲ್ಲ ಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರ ಕಣ್ಣಿಗೆ ಹಬ್ಬದಂತಾಗಿದೆ.

ಬಿಸಿಲಿನ ತಾಪದಿಂದ ತತ್ತರಿಸಿದ್ದ ಪ್ರಾಣಿ ಪಕ್ಷಿಗಳು ಇದೀಗ ಮಳೆಯ ತಂಪಿನಲ್ಲಿ ಚೇತರಿಸಿಕೊಂಡಿವೆ. ಬಂಡೀಪುರದಲ್ಲಿ 13 ವಲಯಗಳಿದ್ದು, 284 ಕೆರೆಕಟ್ಟೆಗಳಿವೆ. ಇತ್ತೀಚಿನ ಮಳೆಯ ಪರಿಣಾಮವಾಗಿ ಕೆರೆಗಳು ಬತ್ತಿಹೋಗದೆ ಉಳಿದಿವೆ. ಜೊತೆಗೆ 40 ಕೆರೆಗಳಿಗೆ ಸೋಲಾರ್ ಮೋಟಾರ್‌ಗಳ ಮೂಲಕ ನೀರು ತುಂಬಿಸುವ ವ್ಯವಸ್ಥೆ ಮಾಡಲಾಗಿದ್ದು, ವನ್ಯಜೀವಿಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಿಸಲಾಗಿದೆ.

ಒಟ್ಟಾರೆ, ಅರಣ್ಯ ಸಿಬ್ಬಂದಿಯ ಪರಿಶ್ರಮ ಹಾಗೂ ವರುಣನ ಅನುಗ್ರಹದಿಂದ ಈ ಬಾರಿ ಬಂಡೀಪುರದಲ್ಲಿ ಕಾಡು ಬೆಂಕಿ ಆತಂಕ ದೂರವಾಗಿ, ಹಸಿರು ವಾತಾವರಣ ಪ್ರವಾಸಿಗರನ್ನು ಆಕರ್ಷಿಸುತ್ತಿದೆ

RELATED ARTICLES
- Advertisment -
Google search engine

Most Popular