ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿಗೆ ಡ್ರಗ್ಸ್ ಮಾಫಿಯಾ ಹೆಚ್ಚಾಗಿ ಡ್ರಗ್ ಪೆಡ್ಲರ್‌ಗಳು ಸಿಕ್ಕಿಬೀಳುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಮತ್ತೊಮ್ಮೆ ಮಾದಕ ವಸ್ತುಗಳ ವಿರುದ್ಧ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 14 ಕೋಟಿ 75 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ನಂದಿನಿ ಲೇಔಟ್ ಮತ್ತು ಯಶವಂತಪುರ ಪೊಲೀಸರು ಒಟ್ಟು 13 ಕೆಜಿ 700 ಗ್ರಾಂ ತೂಕದ ಹೈಡ್ರೋ ಗಾಂಜಾ ಹಾಗೂ ಎಂಡಿಎಂಎ (MDMA) ಕ್ರಿಸ್ಟಲ್ ಅನ್ನು ಸೀಜ್ ಮಾಡಿದ್ದಾರೆ.
ನಂದಿನಿ ಲೇಔಟ್ ಪೊಲೀಸರು ಖಚಿತ ಮಾಹಿತಿ ಮೇರೆಗೆ ಕೇರಳ ಮೂಲದ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಬಂಧಿಸಿದ್ದು, ಸೌಗೇಶ್ ಮತ್ತು ಅಲ್ತಾಫ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಳಪಿಗಳಿಂದ ಒಟ್ಟು 5.75 ಕೋಟಿ ರೂ.ಮೌಲ್ಯದ 5 ಕೆಜಿ 700 ಗ್ರಾಂ ಹೈಡ್ರೋ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ವಿದೇಶದಿಂದ ಈ ಹೈಡ್ರೋ ಗಾಂಜಾವನ್ನು ತರಿಸಿ ಸ್ಥಳೀಯರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಕೇರಳದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಇವರ ಮೇಲೆ ಈ ಹಿಂದೆಯೇ ಅಲ್ಲಿನ ಎನ್ಡಿಪಿಎಸ್ (NDPS) ಕಾಯ್ದೆಯಡಿ ಪ್ರಕರಣಗಳು ದಾಖಲಾಗಿವೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ನಂದಿನಿ ಲೇಔಟ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಯಶವಂತಪುರ ಪೊಲೀಸರು ಅಂತರರಾಷ್ಟ್ರೀಯ ಮಟ್ಟದ ಡ್ರಗ್ ಜಾಲವನ್ನು ಬೇಧಿಸಿದ್ದಾರೆ. ಮಾದಕ ವಸ್ತುಗಳ ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಗಳಾದ ಸೈಯದ್ ಸುಹೇಲ್, ಮೊಹಮ್ಮದ್ ಸಮೀರ್, ಸಾದಿಕ್ ಪಾಷಾ ಮತ್ತು ಮೊಹಮ್ಮದ್ ಹಕ್ರನ್ನು ಬಂಧಿಸಲಾಗಿದ್ದು, ಈ ನಾಲ್ವರಿಂದ 9 ಕೋಟಿ ರೂಪಾಯಿ ಮೌಲ್ಯದ 8 ಕೆಜಿ ಎಂಡಿಎಂಎ (MDMA) ಸೀಜ್ ಮಾಡಲಾಗಿದೆ.
ಆರೋಪಿಗಳು ನೈಜೀರಿಯಾ ಪ್ರಜೆಗಳಿಂದ ಡ್ರಗ್ಸ್ ಖರೀದಿಸಿ ನಗರದಲ್ಲಿ ಸ್ಥಳೀಯರಿಗೆ ಪೂರೈಸುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತರಿಂದ ಒಂದು ಕಾರು ಹಾಗೂ ಐದು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಲ್ಲಿ ಸೈಯದ್ ಸುಹೇಲ್ ಹೊಸಕೋಟೆ ಠಾಣೆಯ ರೌಡಿಶೀಟರ್ ಆಗಿದ್ದು, ಈ ಹಿಂದೆ ಪ್ರಕರಣವೊಂದರಲ್ಲಿ ಪೊಲೀಸರು ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಸದ್ಯ ಈ ಜಾಲಕ್ಕೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ನೈಜೀರಿಯಾ ಪ್ರಜೆಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.



