ಬೆಂಗಳೂರು: ನೈಜ ನವಿಲು ಗರಿಗಳನ್ನು ಬಳಸಿ ತಯಾರಿಸಿದ ಉಡುಪು ಧರಿಸಿ ರೀಲ್ಸ್ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಿಗ್‌ಬಾಸ್ ಮಾಜಿ ಸ್ಪರ್ಧಿಗಳಾದ ಕಿಶನ್ ಮತ್ತು ನಿವೇದಿತಾ ಗೌಡ ವಿರುದ್ಧ ಅರಣ್ಯ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಇಬ್ಬರೂ ನವಿಲು ಗರಿಗಳಿರುವ ಉಡುಪು ಧರಿಸಿ ‘ಹೇ ನವಿಲೇ ನವಿಲೇ’ ಹಾಡಿಗೆ ನೃತ್ಯ ಮಾಡಿದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಈ ಕುರಿತು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿ, ರೀಲ್ಸ್‌ನಲ್ಲಿ ನವಿಲು ಗರಿಗಳನ್ನು ವ್ಯಾಪಕವಾಗಿ ಬಳಸಿರುವ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ನೈಜ ನವಿಲು ಗರಿಗಳನ್ನು ಬಳಸಿ ಉಡುಪು ತಯಾರಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿರುವುದು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972ರ ಉಲ್ಲಂಘನೆಯಾಗಬಹುದು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ಪ್ರಾದೇಶಿಕ ನಗರ ವಿಭಾಗದ ಕಗ್ಗಲಿಪುರ ಅರಣ್ಯ ವಲಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಪ್ರಕರಣ ದಾಖಲಿಸಿ ಪಾರದರ್ಶಕ ತನಿಖೆ ನಡೆಸುವಂತೆ ಹಾಗೂ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಲಾಗಿದೆ.



