ನವದೆಹಲಿ: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರು ವಿಯೆಟ್ನಾಂ ಅಧ್ಯಕ್ಷ ತೋ ಲಾಮ್ ಅವರನ್ನು ಭೇಟಿ ಮಾಡಿ, ಉಭಯ ದೇಶಗಳ ನಡುವಿನ ಬಹುಮುಖಿ ಮತ್ತು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಕುರಿತು ಚರ್ಚಿಸಿದರು.
ವಿಯೆಟ್ನಾಂ ಅಧ್ಯಕ್ಷ ತೋ ಲಾಮ್ ಅವರು ಮೂರು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ನವದೆಹಲಿಗೆ ಆಗಮಿಸಿದರು. ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ವರ್ಷ ಭಾರತ ಮತ್ತು ವಿಯೆಟ್ನಾಂ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಹತ್ತು ವರ್ಷಗಳು ತುಂಬುತ್ತಿದ್ದು, ಈ ಭೇಟಿಯು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ದೆಹಲಿಗೆ ಬರುವ ಮುನ್ನ ಅಧ್ಯಕ್ಷ ತೋ ಲಾಮ್ ಅವರು ಬಿಹಾರದ ಮಹಾಬೋಧಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ಅವರನ್ನು ಬಿಹಾರದ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸ್ವಾಗತಿಸಿದರು.
ಇಂದು ರಾಷ್ಟ್ರಪತಿ ಭವನದಲ್ಲಿ ಅವರಿಗೆ ಔಪಚಾರಿಕ ಸ್ವಾಗತ ಕೋರಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಂಬಂಧಗಳು, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಅವರು ಸಮಗ್ರ ಚರ್ಚೆ ನಡೆಸಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಅವರು ಭೇಟಿ ಮಾಡಲಿದ್ದಾರೆ.
ಮುಂಬೈ ಭೇಟಿ
ತಮ್ಮ ಪ್ರವಾಸದ ಭಾಗವಾಗಿ ಅವರು ಮುಂಬೈಗೆ ಭೇಟಿ ನೀಡಲಿದ್ದು, ಅಲ್ಲಿನ ರಾಷ್ಟ್ರೀಯ ಷೇರು ಮಾರುಕಟ್ಟೆ ವೀಕ್ಷಣೆ ಮತ್ತು ಮಹಾರಾಷ್ಟ್ರದ ರಾಜ್ಯಪಾಲರು ಹಾಗೂ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ. ಅಲ್ಲದೆ, ವ್ಯಾಪಾರ ವೇದಿಕೆಯೊಂದರಲ್ಲಿ ಭಾಗವಹಿಸಲಿದ್ದಾರೆ.
ವಿಯೆಟ್ನಾಂನ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತೋ ಲಾಮ್ ಅವರು ಕೈಗೊಂಡಿರುವ ಮೊದಲ ಭಾರತದ ಪ್ರವಾಸ ಇದಾಗಿದೆ. ಭಾರತ ಮತ್ತು ವಿಯೆಟ್ನಾಂ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳು ಈ ಭೇಟಿಯ ಮೂಲಕ ಹೊಸ ಎತ್ತರಕ್ಕೆ ಏರುವ ನಿರೀಕ್ಷೆಯಿದೆ. (ಏಜೆನ್ಸಿಸ್)



