ಸ್ತನ ಕ್ಯಾನ್ಸರ್ ಎಂದರೆ ಕೇವಲ ವಯಸ್ಸಾದವರನ್ನು ಕಾಡುವ ಕಾಯಿಲೆ ಎಂಬ ಕಾಲವೊಂದಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರಲ್ಲಿ ಈ ಕಾಯಿಲೆಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2012 ರಿಂದ 2022 ರ ನಡುವೆ ಯುವತಿಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಪ್ರತಿ ವರ್ಷ 1.4% ರಷ್ಟು ಹೆಚ್ಚಳ ಕಂಡಿರುವುದು ಆತಂಕಕಾರಿ ವಿಷಯವಾಗಿದೆ.
ಯುವತಿಯರಲ್ಲಿ ಈ ಕಾಯಿಲೆ ಹೆಚ್ಚಲು ಕಾರಣಗಳೇನು?
ತಜ್ಞರ ಪ್ರಕಾರ, ಬದಲಾದ ಜೀವನಶೈಲಿ ಮತ್ತು ಪರಿಸರ ಈ ಬದಲಾವಣೆಗೆ ಮುಖ್ಯ ಕಾರಣಗಳು.
ಮದ್ಯಪಾನದ ಅತಿಯಾದ ಬಳಕೆ: ಮದ್ಯಪಾನವು ದೇಹದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟವನ್ನು ಏರುಪೇರು ಮಾಡುತ್ತದೆ ಮತ್ತು ಡಿಎನ್‌ಎ (DNA) ಮೇಲೆ ಹಾನಿ ಉಂಟುಮಾಡುತ್ತದೆ, ಇದು ಕ್ಯಾನ್ಸರ್ ಗೆ ದಾರಿಯಾಗಬಹುದು.
ಬೊಜ್ಜು ಮತ್ತು ಜಡ ಜೀವನಶೈಲಿ: ದೈಹಿಕ ಚಟುವಟಿಕೆ ಇಲ್ಲದಿರುವುದು ಮತ್ತು ಬೊಜ್ಜು ಹಾರ್ಮೋನುಗಳ ಅಸಮತೋಲನಕ್ಕೆ ಕಾರಣವಾಗುತ್ತದೆ. ಇದು ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಜೆನೆಟಿಕ್ (ವಂಶವಾಹಿ) ಕಾರಣಗಳು: ಕೆಲವರಲ್ಲಿ BRCA1 ಮತ್ತು BRCA2 ಜೀನ್‌ಗಳಲ್ಲಿನ ಬದಲಾವಣೆಗಳು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತವೆ. ಆದರೂ, ಬಹುತೇಕ ಪ್ರಕರಣಗಳು ವಂಶವಾಹಿಯಲ್ಲದಿದ್ದರೂ ಕಾಣಿಸಿಕೊಳ್ಳುತ್ತಿವೆ.
ಪರಿಸರ ಮಾಲಿನ್ಯ: ಹೆಚ್ಚುತ್ತಿರುವ ವಾಯು ಮಾಲಿನ್ಯ ಮತ್ತು ಆಹಾರದಲ್ಲಿ ಸೇರಿಕೊಳ್ಳುತ್ತಿರುವ ಮೈಕ್ರೋಪ್ಲಾಸ್ಟಿಕ್ ಕೂಡ ಕ್ಯಾನ್ಸರ್‌ಗೆ ಕಾರಣವಾಗುತ್ತಿರಬಹುದು ಎಂಬ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.
ತಪಾಸಣೆಯ ಕೊರತೆ: ಯುವತಿಯರಿಗೆ ಕ್ಯಾನ್ಸರ್ ಬರುವುದಿಲ್ಲ ಎಂಬ ತಪ್ಪು ಕಲ್ಪನೆ ಮತ್ತು ಮುಜುಗರದಿಂದಾಗಿ ಅನೇಕರು ಆರಂಭಿಕ ಹಂತದಲ್ಲಿ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ.
ನಿರ್ಲಕ್ಷ್ಯಿಸಬಾರದ ಆರಂಭಿಕ ಲಕ್ಷಣಗಳು
ಸ್ತನ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ತುಂಬಾ ಸೌಮ್ಯವಾಗಿರುತ್ತವೆ. ಇವುಗಳನ್ನು ನಿರ್ಲಕ್ಷಿಸುವುದು ಅಪಾಯಕಾರಿ.
ನೋವಿಲ್ಲದ ಗಂಟುಗಳು: ಸ್ತನದಲ್ಲಿ ಸಣ್ಣದಾದ, ನೋವಿಲ್ಲದ ಗಂಟು ಕಾಣಿಸಿಕೊಳ್ಳುವುದು.
ಚರ್ಮದಲ್ಲಿ ಬದಲಾವಣೆ: ಸ್ತನದ ಮೇಲ್ಭಾಗದ ಚರ್ಮವು ಕಿತ್ತಳೆ ಹಣ್ಣಿನ ಸಿಪ್ಪೆಯಂತೆ ಒರಟಾಗುವುದು ಅಥವಾ ಬಣ್ಣ ಬದಲಾಗುವುದು.
ತೊಟ್ಟುಗಳಿಂದ ಸ್ರವಿಸುವಿಕೆ: ನಿಪ್ಪಲ್‌ನಿಂದ ರಕ್ತ ಅಥವಾ ಅಸಹಜ ದ್ರವ ಹೊರಬರುವುದು.
ಆಕಾರದಲ್ಲಿ ಬದಲಾವಣೆ: ಸ್ತನದ ಗಾತ್ರ ಅಥವಾ ಆಕಾರದಲ್ಲಿ ಅಸಹಜ ವ್ಯತ್ಯಾಸ ಕಂಡುಬರುವುದು.
ನಿರಂತರ ಸುಸ್ತು: ಯಾವುದೇ ಕೆಲಸ ಮಾಡದಿದ್ದರೂ ವಿಪರೀತ ಸುಸ್ತು ಅಥವಾ ಸಣ್ಣ ಪ್ರಮಾಣದ ಅಸ್ವಸ್ಥತೆ ಕಾಡುವುದು.
ಇಂದಿನ ಕಾರ್ಯನಿರತ ಜೀವನದಲ್ಲಿ ಯುವತಿಯರು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡುತ್ತಿಲ್ಲ. ಸ್ತನದಲ್ಲಿ ಯಾವುದೇ ಬದಲಾವಣೆ ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ‘ಮ್ಯಾಮೊಗ್ರಫಿ’ ಅಥವಾ ಅಗತ್ಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಆರಂಭಿಕ ಪತ್ತೆಯೇ ಸ್ತನ ಕ್ಯಾನ್ಸರ್‌ಗೆ ಇರುವ ಅತ್ಯುತ್ತಮ ಚಿಕಿತ್ಸೆ.



