ನವದೆಹಲಿ : ಆರೋಗ್ಯ ಸಂಶೋಧನೆ ಮತ್ತು ಕ್ವಾಂಟಮ್ ತಂತ್ರಜ್ಞಾನದ ಕ್ಷೇತ್ರದಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತ ಮತ್ತು ಜಪಾನ್ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿವೆ. ಇದು ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ (Innovation) ಕ್ಷೇತ್ರಗಳಲ್ಲಿ ಎರಡೂ ದೇಶಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ.
ಒಪ್ಪಂದದ ಪ್ರಮುಖ ಅಂಶಗಳು ಹೀಗಿದೆ
ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಜಪಾನ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಸಚಿವೆ ಕಿಮಿ ಒನೊಡಾ ಅವರ ನಡುವೆ ನಡೆದ ಸಭೆಯಲ್ಲಿ ಒಪ್ಪಂದಗಳು ನಡೆದಿವೆ.
ಆರೋಗ್ಯ ಕ್ಷೇತ್ರ: ಜಪಾನ್ ವೈದ್ಯಕೀಯ ಸಂಶೋಧನಾ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯ ನಡುವೆ ವೈದ್ಯಕೀಯ ಉಪಕರಣಗಳ ಸಹಕಾರಕ್ಕಾಗಿ ಒಪ್ಪಂದ (MoC) ಏರ್ಪಟ್ಟಿದೆ.
ಕ್ವಾಂಟಮ್ ತಂತ್ರಜ್ಞಾನ: ಭವಿಷ್ಯದ ಸುಧಾರಿತ ತಂತ್ರಜ್ಞಾನಗಳಲ್ಲಿ ಸಹಕರಿಸಲು ಎರಡೂ ದೇಶಗಳ ನಡುವೆ ಉದ್ದೇಶ ಪತ್ರಕ್ಕೆ (Letter of Intent) ಸಹಿ ಹಾಕಲಾಗಿದೆ.
ಈ ಸಹಕಾರವು ಆಗಸ್ಟ್ 2025 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಪಾನ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕೈಗೊಂಡ ನಿರ್ಧಾರಗಳ ಮುಂದುವರಿದ ಭಾಗವಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್, “ಜಪಾನ್‌ನ ಸುಧಾರಿತ ತಂತ್ರಜ್ಞಾನ ಮತ್ತು ಭಾರತದ ನುರಿತ ಮಾನವ ಸಂಪನ್ಮೂಲಗಳು ಪರಸ್ಪರ ಪೂರಕವಾಗಿವೆ” ಎಂದು ತಿಳಿಸಿದರು. ಕ್ವಾಂಟಮ್ ತಂತ್ರಜ್ಞಾನ, ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಕ್ಲೀನ್ ಎನರ್ಜಿ ಕ್ಷೇತ್ರಗಳಲ್ಲಿ ಜಂಟಿ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಜಪಾನ್ ಸಚಿವೆ ಕಿಮಿ ಒನೊಡಾ ಅವರು ಭಾರತದ ಕ್ಷಿಪ್ರ ಆರ್ಥಿಕ ಬೆಳವಣಿಗೆ ಮತ್ತು ಕೃತಕ ಬುದ್ಧಿಮತ್ತೆ (AI) ಬಳಕೆಯನ್ನು ಶ್ಲಾಘಿಸಿದರು. (ಏಜೆನ್ಸಿಸ್)



