ಚೆನ್ನೈ: ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ನಟ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯದ ಜನತೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಹಿಂದಿನ ಸರ್ಕಾರ ರಾಜ್ಯದ ಖಜಾನೆ ಖಾಲಿ ಮಾಡಿದೆ. ನನ್ನ ಮೇಲೆ 10 ಲಕ್ಷ ಕೋಟಿ ಸಾಲವಿದೆ. ಇಂತಹ ದುಸ್ಥಿತಿಯಲ್ಲಿ ನಾನು ಸಿಎಂ ಆಗಿ ಬಂದಿದ್ದೇನೆ ಎಂದು ಹೇಳಿದ್ದರು. ವಿಜಯ್ ಅವರ ಈ ಹೇಳಿಕೆಗೆ ಮಾಜಿ ಸಿಎಂ ಎಂ.ಕೆ.ಸ್ಟಾಲಿನ್ ಕಿಡಿಕಾರಿದ್ದಾರೆ.
ನೂತನ ಸಿಎಂ ವಿಜಯ್ ಇಂತಹ ಹೇಳಿಕೆ ನೀಡಿ ರಾಜ್ಯದ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸರ್ಕಾರದ ಬಳಿ ಹಣವೇ ಇಲ್ಲ ಎಂಬ ನಿಮ್ಮ ಹೇಳಿಕೆ ಸರಿಯಲ್ಲ ಇದು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಬೇಡಿ ಎಂದು ಸ್ಟಾಲಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ತಮಿಳುನಾಡಿನ ನೂತನ ಮುಖ್ಯಮಂತ್ರಿ, ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ. ಅಧಿಕಾರ ಸ್ವೀಕರಿಸಿದ ತಕ್ಷಣವೇ ನೀವು ಸಹಿ ಹಾಕಿರುವ ಘೋಷಣೆಗಳನ್ನೂ ಸ್ವಾಗತಿಸುತ್ತೇನೆ. ಆದರೆ ಸರ್ಕಾರದ ಬಳಿ ಹಣವೇ ಇಲ್ಲ ಎಂದು ಆರಂಭದಲ್ಲೇ ಹೇಳಬೇಡಿ. ಹಣ ಇದೆ. ಜನರಿಗೆ ಅದನ್ನು ತಲುಪಿಸುವ ಮನಸ್ಸು ಮತ್ತು ಆಡಳಿತ ನಡೆಸುವ ಸಾಮರ್ಥ್ಯ ಬೇಕಷ್ಟೇ ಎಂದಿದ್ದಾರೆ.
ಕೋವಿಡ್, ಪ್ರವಾಹ ಸೇರಿದಂತೆ ಅನೇಕ ಸಂಕಷ್ಟಗಳು ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ನಿರ್ಲಕ್ಷ್ಯದ ನಡುವೆಯೂ ನಾವು ಐದು ವರ್ಷಗಳ ಕಾಲ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನೀವು ನಿಮ್ಮ ಮೊದಲ ಭಾಷಣದಲ್ಲೇ “ಹಿಂದಿನ ಸರ್ಕಾರ ₹10 ಲಕ್ಷ ಕೋಟಿ ಸಾಲ ಬಿಟ್ಟು ಖಜಾನೆ ಖಾಲಿ ಮಾಡಿದೆ” ಎಂದು ಆರೋಪಿಸಿದ್ದೀರಿ. ಆದರೆ ತಮಿಳುನಾಡಿನ ಸಾಲದ ಮಟ್ಟ ಅನುಮತಿಸಲಾದ ಮಿತಿಯೊಳಗೇ ಇದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಫೆಬ್ರವರಿ ಬಜೆಟ್‌ನಲ್ಲೇ ರಾಜ್ಯದ ಆರ್ಥಿಕ ಸ್ಥಿತಿಯನ್ನು ನಾವು ಸ್ಪಷ್ಟವಾಗಿ ವಿವರಿಸಿದ್ದೇವೆ. ಅದು ನಿಮಗೆ ತಿಳಿದಿರಲಿಲ್ಲವೇ ? ಅದಾದ ಬಳಿಕವೇ ನೀವು ಜನರಿಗೆ ಹಲವು ಭರವಸೆಗಳನ್ನು ನೀಡಿದ್ದೀರಲ್ಲಾ ? ಹೀಗಾಗಿ ಈಗ ಜನರನ್ನು ತಪ್ಪು ದಾರಿಗೆಳೆಯಲು ಯತ್ನಿಸಬೇಡಿ. ಪ್ರಾಯೋಗಿಕವಾಗಿ ಸಾಧ್ಯವಿರುವ ಭರವಸೆಗಳನ್ನಷ್ಟೇ ನೀಡುತ್ತೇನೆ ಎಂದು ಹೇಳಿ ಅಧಿಕಾರಕ್ಕೆ ಬಂದ ನೀವು ಈಗಷ್ಟೇ ಆಡಳಿತಕ್ಕೆ ಕಾಲಿಟ್ಟಿದ್ದೀರಿ. ಜನರಿಗೆ ನೀಡಿದ ಭರವಸೆಗಳನ್ನು ಹೇಗೆ ಈಡೇರಿಸಬೇಕು ಎಂಬ ಆಡಳಿತದ ಸೂಕ್ಷ್ಮತೆಗಳನ್ನು ನಮ್ಮಂತೆಯೇ ನೀವು ಕೂಡ ಬೇಗನೆ ಅರಿತುಕೊಳ್ಳುವಿರಿ ಎಂಬ ನಂಬಿಕೆ ಇದೆ ಎಂದಿದ್ದಾರೆ.
ನಿಮ್ಮ ಮೇಲೆ ವಿಶ್ವಾಸವಿಟ್ಟು ಮತಹಾಕಿದ ಜನರಂತೆ ನಾನೂ ಅದನ್ನೇ ನಿರೀಕ್ಷಿಸುತ್ತೇನೆ. ನಿಮ್ಮ ಆಡಳಿತದಲ್ಲಿ ತಮಿಳುನಾಡಿನ ಅಭಿವೃದ್ಧಿಯ ಪಯಣ ಮುಂದುವರಿಯಲಿ ಎಂದು ತಿಳಿಸಿದ್ದಾರೆ.



