ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಈ ವೇಳೆ ದಾಳಿಯಲ್ಲಿ ಆರು ಮೊಬೈಲ್ ಫೋನ್‌ಗಳು, ಎಂಟು ಸಿಮ್ ಕಾರ್ಡ್‌ಗಳು ಸೇರಿದಂತೆ ಹಲವು ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಇದಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಮೊಬೈಲ್ ಹೊಂದಿದ್ದ ಆರೋಪದಡಿ ನಾಲ್ವರು ವಿಚಾರಣಾಧೀನ ಕೈದಿಗಳ ಹೆಸರುಗಳನ್ನು ಪ್ರಕರಣದಲ್ಲಿ ಉಲ್ಲೇಖಿಸಲಾಗಿದೆ.
ಮೇ 8 ಮತ್ತು 9ರಂದು ನಡೆದ ದಾಳಿಯಲ್ಲಿ ಸಹಾಯಕ ಅಧೀಕ್ಷಕ ಟಿಕೆ.ಲೋಕೇಶ್ ಅವರ ಮೇಲ್ವಿಚಾರಣೆಯಲ್ಲಿ ಜೈಲಿನ ಸೆಕ್ಯುರಿಟಿ ಸೆಕ್ಷನ್-2ರ ಕೊಠಡಿ ಸಂಖ್ಯೆ 6ರಲ್ಲಿ ಪರಿಶೀಲನೆ ನಡೆಸಲಾಯಿತು.
ದಾಳಿಯ ವೇಳೆ ಮುಸ್ತಫಾ, ಅಬುಬಲ್ ರಹ್ಮಾನ್, ಸಲ್ಮಾನ್ ಮತ್ತು ಫಜಲ್ ಎಂಬ ವಿಚಾರಣಾಧೀನ ಕೈದಿಗಳ ಕೊಠಡಿಗಳಿಂದ ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಕೈದಿಗಳಿಂದ ನಾಲ್ಕು ಮೊಬೈಲ್ ಫೋನ್‌ಗಳು, ಏಳು ಸಿಮ್ ಕಾರ್ಡ್‌ಗಳು, ಒಂದು ಇಯರ್‌ಬಡ್, ಎರಡು ಇಯರ್‌ಫೋನ್‌ಗಳು, ಒಂದು ಚಾರ್ಜರ್ ಹಾಗೂ ಚಾರ್ಜಿಂಗ್ ಕನೆಕ್ಟರ್‌ಗಳನ್ನ ಅಧಿಕಾಗಳು ವಶಪಡಿಸಿಕೊಂಡಿದ್ದಾರೆ.



