ನವದೆಹಲಿ: ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಿದ್ದಂತೆ. ಅವರಲ್ಲಿ ಸೋಷಿಯಲ್ ಮೀಡಿಯಾ ಬಳಕೆದಾರರು, ಆರ್‌ಟಿಐ ಕಾರ್ಯಕರ್ತರು ಇರುತ್ತಾರೆ. ಈ ವ್ಯವಸ್ಥೆ ಮೇಲೆ ದಾಳಿ ಮಾಡುತ್ತಾರೆ ಎಂದು ಸುಪ್ರೀಂ ಕೋರ್ಟ್‌ನ ಸಿಜೆಐ ಸೂರ್ಯ ಕಾಂತ್ ಅವರು ಕಿಡಿಕಾರಿದ್ದಾರೆ.
ಹಿರಿಯ ವಕೀಲರ ನೇಮಕಾತಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಮಾತನಾಡಿದ ಸಿಜೆಐ ಸೂರ್ಯ ಕಾಂತ್, ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಇದ್ದಾರೆ. ಅವರಿಗೆ ಯಾವುದೇ ಉದ್ಯೋಗವಿಲ್ಲ, ವೃತ್ತಿಯಲ್ಲಿ ಸ್ಥಾನವಿಲ್ಲ. ಅವರಲ್ಲಿ ಕೆಲವರು ಸಾಮಾಜಿಕ ಮಾಧ್ಯಮ ಬಳಕೆದಾರರು, ಮಾಧ್ಯಮದವರು ಹಾಗೂ ಆರ್‌ಟಿಐ ಕಾರ್ಯಕರ್ತರು ಆಗಿರುತ್ತಾರೆ. ಅವರು ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಿಜೆಐ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠದ ಮುಂದೆ ಪ್ರಕರಣದ ವಿಚಾರಣೆ ನಡೆಯುತ್ತಿತ್ತು. ಈ ವೇಳೆ, ದೆಹಲಿ ಹೈಕೋರ್ಟ್ ಒಬ್ಬ ವಕೀಲರಿಗೆ ಹಿರಿಯ ವಕೀಲ ಹುದ್ದೆ ನೀಡಿದರೂ, ಅವರ ವೃತ್ತಿಪರ ನಡವಳಿಕೆ ಸರಿಯಿಲ್ಲದಿದ್ದರೆ ಸುಪ್ರೀಂ ಕೋರ್ಟ್ ಅದನ್ನು ರದ್ದುಗೊಳಿಸಬಹುದು ಎಂದು ಸಿಜೆಐ ಎಚ್ಚರಿಸಿದರು.
ಸಾಮಾಜಿಕ ಮಾಧ್ಯಮದ ವರ್ತನೆ ಕುರಿತು ಉಲ್ಲೇಖಿಸಿದ ಅವರು, ವ್ಯವಸ್ಥೆಯ ಮೇಲೆ ದಾಳಿ ಮಾಡುವ ಪರಾವಲಂಬಿಗಳು ಈಗಾಗಲೇ ಸಮಾಜದಲ್ಲಿದ್ದಾರೆ. ನೀವು ಅವರೊಂದಿಗೆ ಕೈಜೋಡಿಸಲು ಬಯಸುತ್ತೀರಾ? ಎಂದು ಪ್ರಶ್ನಿಸಿದರು.



