ಮೈಸೂರು : ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವ ಬಯಕೆಯನ್ನು ನಾಡಿನ ಜನರು ಹೊಂದಿದ್ದು, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಈ ಕೆಲಸ ಆರಂಭವಾಗಲಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಬೋಗಾದಿ ರಿಂಗ್ ರಸ್ತೆಯ ನಾಗಲಿಂಗೇಶ್ವರ-ಬೋಗೇಶ್ವರ ದೇವಸ್ಥಾನದ ಎದುರಿನ ಬ್ಯಾಂಕರ್ಸ್ ಲೇಔಟ್‍ನಲ್ಲಿರುವ ಬೃಹತ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಚಾಮುಂಡೇಶ್ವರಿ ಕ್ಷೇತ್ರದ ಜನರೊಂದಿಗೆ ಜನತಾದಳ ಸಮಾವೇಶದಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸಿ ಕಳುಹಿಸುವ ಮೂಲಕ ಎಚ್.ಡಿ.ಕುಮಾರಸ್ವಾಮಿ ಅವರ ನಾಯಕತ್ವ ಬಲಪಡಿಸಲಾಗುವುದು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ವರುಣಾ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಸಮಾವೇಶ ಯಶಸ್ವಿಯಾಗಿದ್ದು, ಕೊನೆಯದಾಗಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಡಲಾಗಿದೆ. ನಾನು, ಹರೀಶ್‍ಗೌಡ ಇರಲಿ, ಯಾರೇ ಇರಲಿ, ಇಲ್ಲದಿರಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಗಟ್ಟಿಯಾಗಿದೆ. ಶಕ್ತಿಯುತ ಕಾರ್ಯಕರ್ತರು ಕಂಕಣಬದ್ದವಾಗಿ ಇರುತ್ತೇವೆ ಎಂದು ಸಮಾವೇಶದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು.
ಕುಮಾರಸ್ವಾಮಿ ಸದಾ ಕಾಲ ರೈತರ ಪರವಾಗಿ ಯೋಚಿಸುವ ವ್ಯಕ್ತಿ. ತಮಗೆ ಸಿಕ್ಕ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವ ಕೆಲಸ ಬಿಟ್ಟರೆ ಬೇರೇನೂ ಇಲ್ಲ ಎಂದು ಹೇಳಿದರು.
ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಕೃಷ್ಣರೆಡ್ಡಿ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಜನರೊಂದಿಗೆ ಜನತಾದಳ ಕಾರ್ಯಕ್ರಮ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 73ನೇಯದ್ದು. ಎಚ್.ಡಿ.ದೇವೇಗೌಡರು ಆರು ದಶಕಗಳಿಂದ ನಾಡು, ದೇಶದ ಪರವಾಗಿ ಕೆಲಸ ಮಾಡುತ್ತಾ ಬಂದಿದ್ದಾರೆ. ಎಚ್.ಡಿ.ದೇವೇಗೌಡರು ಕಟ್ಟಿರುವ ಪಕ್ಷಕ್ಕೆ 25 ವರ್ಷ ಆಗಿರುವ ಕಾರಣ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಸಂಚಾರ ಮಾಡುತ್ತಿದ್ದಾರೆ. ಡಿ.ದೇವರಾಜ ಅರಸು, ಎಸ್.ಬಂಗಾರಪ್ಪ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಪಕ್ಷ ಕಟ್ಟಿದರೂ ಉಳಿಯಲಿಲ್ಲ. ಆದರೆ, ಜನರ ಪರವಾಗಿ ಕೆಲಸ ಮಾಡುತ್ತಿರುವ ಜೆಡಿಎಸ್ ಪಕ್ಷವನ್ನು ಜನರೇ ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಚುನಾವಣೆಯಲ್ಲಿ ಜನರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಈಗ ಗೃಹಲಕ್ಷ್ಮೀ ಯೋಜನೆಯ ಹತ್ತು ತಿಂಗಳ ಬಾಕಿ ಹಣ ಉಳಿಸಿಕೊಂಡಿದೆ. ರಾಜ್ಯದ ಖಜಾನೆಯಲ್ಲಿ ಹಣವಿದ್ದರೆ ತಕ್ಷಣವೇ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು. ಮೇಕೆದಾಟು ಯೋಜನೆ ಜಾರಿಗೆ ತಂದು ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದ ಡಿಕೆಶಿ ಅವರು ಈಗ ಮೂರು ವರ್ಷಗಳ ಕಾಲವಾದರೂ ಏನು ಮಾಡಿಲ್ಲ. ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಮೇಕೆದಾಟು ಯೋಜನೆ ಸುಳ್ಳು ಹೇಳಿದ್ದರಿಂದ ಜನರು ಪಾಠ ಕಲಿಸುವ ದಿನಗಳು ಬರಲಿವೆ ಎಂದು ಹೇಳಿದರು.



