ಚಾಮರಾಜನಗರ : ಕನ್ನಡ ಪತ್ರಿಕೋದ್ಯಮಕ್ಕೆ ನೂತನ ರೂಪ ಹಾಗೂ ಓದುಗರನ್ನು ಸೃಷ್ಟಿಸಿದ ಮಹಾನ್ ಸಂಪಾದಕರು ವೈ ಎನ್ ಕೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸಾ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವಂಡರ್ ಕಣ್ಣು ವೈ ಎನ್ಕೆ 100. ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಕೊಡುಗೆಗಳು ಕುರಿತು ಮಾತನಾಡುತ್ತ ವೈ ಎನ್ ಕೆ ಎಂದೆ ಪ್ರಸಿದ್ಧಿಯಾಗಿದ್ದ ಯಳಂದೂರು ನಾರಾಯಣ ಕೃಷ್ಣಮೂರ್ತಿ ಮೂಲತಹ ಚಾಮರಾಜನಗರ ಜಿಲ್ಲೆಯ ಯ ಳಂದೂರು ತಾಲೂಕಿನ ಅಗರ ಗ್ರಾಮದವರು. ಪತ್ರಿಕೋದ್ಯಮದಲ್ಲಿ ಅಪಾರ ಕೀರ್ತಿ, ಯಶಸ್ಸು, ಗೌರವ ಸಂಪಾದಿಸಿದ ವೈಎನ್ಕೆ ನಾಡಿನ ಪತ್ರಿಕೋದ್ಯಮದ ಬಂಧುಗಳಿಗೆ ಮಾದರಿಯಾದವರು.
ದೇಶ ಬಂದು ಪತ್ರಿಕೆಯ ಮೂಲಕ ವೃತ್ತಿ ಜೀವನವನ್ನು ಆರಂಭಿಸಿ ಪ್ರಜಾವಾಣಿ ಪತ್ರಿಕೆಯ ಟಿ ಎಸ್ ಆರ್ ಎಂದೆ ಪ್ರಸಿದ್ಧಿಯಾಗಿದ್ದ ರಾಮಚಂದ್ರ ರಾಯರ ಜೊತೆ ಅನೇಕ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅವರ ನಿಧನದ ನಂತರ ಪ್ರಜಾವಾಣಿ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದವರು. ಉದಯವಾಣಿ ಕನ್ನಡಪ್ರಭ ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ ವೈ ಎನ್ ಕೆ ರವರು ಸಾಹಿತ್ಯ ಕಲೆ ಚಲನಚಿತ್ರರಂಗ ಆಸಕ್ತಿ ಹೊಂದಿದವರು.
ಪತ್ರಿಕೋದ್ಯಮದಲ್ಲಿ ಹೊಸ ಅರ್ಥ ವಿಶ್ಲೇಷಣೆ,ಪದಸಂಪತ್ತು ಮತ್ತು ವಿಶೇಷ ಸಂಪಾದಕೀಯ ಬರವಣಿಗೆಯ ಮೂಲಕ ಜನಪ್ರಿಯ ರಾದವರು. ನಾಡಿನ ಹೆಸರಾಂತ ಲೇಖಕರ ಬೆಳವಣಿಗೆಗೆ ಕಾರಣರಾದವರು. ಗಿರೀಶ್ ಕಾರ್ನಾಡ್,ಬಿ ವಿ ಕಾರಂತ್, ಪಿ ಲಂಕೇಶ್, ಸಿ ಆರ್ ಸಿಂಹ ಶಂಕರ್ ನಾಗ್ ಮುಂತಾದ ಸ್ನೇಹಿತರು ಹಾಗೂ ಮಾರ್ಗದರ್ಶಕ ವಲಯವನ್ನು ಬೆಳೆಸಿಕೊಂಡವರು. ಹಲವಾರು ಹೊಸ ಯುವ ಲೇಖಕರ ಬರವಣಿಗೆಗೆ ಮಹತ್ವ ನೀಡಿ ನಾಡಿನ ಪತ್ರಿಕೋದ್ಯಮದ ಬೆಳವಣಿಗೆಗೆ ಕಾರಣರಾದವರು. ಇವರ ಪತ್ರಿಕೆಯ ಸಂಪಾದಕದಲ್ಲಿ ಹೊಸ ಪದಗಳು, ಹೊಸ ಅರ್ಥ ಹುಡುಕುವ ಕಲೆ ಇವರ ಚಿಂತನೆಯಲ್ಲಿತ್ತು . ಇವರ ವಂಡರ್ ಕಣ್ಣು ಪತ್ರಿಕೋದ್ಯಮಕ್ಕೆ ಅಂಕಣಕ್ಕೆ ಹೊಸ ರೂಪವನ್ನು ನೀಡಿತು.

ಪತ್ರಿಕೋದ್ಯಮದ ಮೌಲ್ಯವನ್ನು ಇಮ್ಮಡಿಗೊಳಿಸಿದ ವೈ ಎನ್ ಕೆ ರವರು ಪತ್ರಿಕೆಗಳಿಗೆ ಸಾಂಸ್ಕೃತಿಕ ರೂಪವನ್ನು ನೀಡಿ ಅನೇಕ ಹೊಸ ಹೊಸ ಅಂಕಣಗಳ ವಿಭಾಗಗಳಿಗೆ ಮಾರ್ಗದರ್ಶನವನ್ನು ನೀಡಿದವರು. ಇವರ ಬರವಣಿಗೆಗಳಲ್ಲಿ ವಿಶೇಷವಾದ ಸಾಹಿತ್ಯದ ಅಂಶಗಳು ಹಾಗೂ ಹಾಸ್ಯಮಯವಾದ ಬರಹಗಳನ್ನು ಕಾಣಬಹುದು. ಹೊಸ ಪದಗಳ ಬಳಕೆಯ ಮೂಲಕ ಶಬ್ದ ಭಂಡಾರದ ಪದಗಳು ನಾಡಿನ ಸಾಹಿತ್ಯ ವಲಯದಲ್ಲಿ ಅಪಾರ ಜನಪ್ರಿಯವಾಗಿದೆ ಎಂದರು . ಇವರು ಚಾಮರಾಜನಗರ ಜಿಲ್ಲೆಯವರು ಎಂಬುದು ನಮಗೆಲ್ಲರಿಗೂ ಹೆಮ್ಮೆ ಎಂದು ತಿಳಿಸಿದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹರವರು ಮಾತನಾಡಿ ವೈ ಎನ್ ಕೆ ರವರು ಬಹುದೊಡ್ಡ ಪ್ರತಿಭೆ.ಅವರ ಎಲ್ಲ ಬರವಣಿಗೆಗಳು ನೂರಾರು ಓದುಗರನ್ನು ಸೃಷ್ಟಿಸಿತು.ಪತ್ರಿಕೆಗಳ ಮೂಲಕ ಸಂಪಾದಕತ್ವಕ್ಕೆ ಮಹತ್ವ ನೀಡಿದ ವೈ ಎನ್ ಕೆ ರವರ ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವುದು ಬಹಳ ವಿಶೇಷವಾದದ್ದು. ವೈಎನ್ಕೆ ರವರ ಹೆಸರಿನಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ರೂಪಿಸಿ ಅವರ ವಿಚಾರಧಾರೆಗಳ ಸಮಗ್ರ ತಿಳುವಳಿಕೆಗೆ ಅವಕಾಶ ನೀಡುವಂತಾಗಲಿ. ವೈಎನ್ಕೆ ವಂಡರ್ ಕಣ್ಣು ವಿಭಾಗದ ಮೂಲಕ ಯುವ ಓದುಗರನ್ನು ಸೆಳೆದ ಮಹಾನ್ ವ್ಯಕ್ತಿ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರ ಪ್ರಸಾದ್ ರವರು ವೈ. ಎನ್ ಕೃಷ್ಣ ಮೂರ್ತಿ ರವರ ಬಗ್ಗೆ ಪ್ರಸ್ತಾವಿಕ ಮಾತುಗಳನ್ನು ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಬಿಕೆ ಆರಾಧ್ಯ ಜಗದೀಶನ್, ಶಿವಲಿಂಗ ಮೂರ್ತಿ, ಸರಸ್ವತಿ, ಉಮೇಶ್, ನಂಜುಂಡ ನಾರಾಯಣ, ಗೋವಿಂದ ನಾಯಕ,ಮಹದೇವ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.



