ಬೆಂಗಳೂರು: ರಾಜ್ಯ ಸರ್ಕಾರ ಆಯೋಜಿಸಿರುವ ಸಾಧನಾ ಸಮಾವೇಶದ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. ಜೆಪಿ ಭವನದಲ್ಲಿ ಮಾತನಾಡಿದ ಅವರು, “ಯಾವ ಸಾಧನೆಗಾಗಿ ಈ ಸಮಾವೇಶ ನಡೆಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ” ಎಂದು ಟೀಕಿಸಿದರು.
ಸಾರಿಗೆ ಇಲಾಖೆಯ ದುಸ್ಥಿತಿಯನ್ನು ಉಲ್ಲೇಖಿಸಿದ ಅವರು, ನೌಕರರ ಬಾಕಿ ವೇತನ ಹಾಗೂ ಅರಿಯರ್ಸ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ ಎಂದು ಆರೋಪಿಸಿದರು. “ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಸೇವೆ ಘೋಷಿಸಿದ ಸರ್ಕಾರ ಈಗ ಸಾರಿಗೆ ಇಲಾಖೆಯನ್ನು ಸಂಕಷ್ಟಕ್ಕೆ ತಳ್ಳಿದೆ” ಎಂದು ಹೇಳಿದರು. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಹೊಸ ಬಸ್ ಖರೀದಿ ಮಾಡಿಲ್ಲ, ಬಸ್‌ಗಳ ನಿರ್ವಹಣೆಗೆ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು 4,500 ಇವಿ ಬಸ್‌ಗಳನ್ನು ಬೆಂಗಳೂರಿಗೆ ತರದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿತ್ತು ಎಂದು ಹೇಳಿದರು.
ಬೆಂಗಳೂರು ನಗರದ ಸ್ಥಿತಿಗತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಿಖಿಲ್, “ಸಿಲಿಕಾನ್ ವ್ಯಾಲಿ ಎಂದೇ ಗುರುತಿಸಿಕೊಂಡಿದ್ದ ಬೆಂಗಳೂರು ಈಗ ಕಸದ ನಗರವಾಗಿದೆ” ಎಂದು ಟೀಕಿಸಿದರು. ಜನರ ತೆರಿಗೆ ಹಣವನ್ನು ಸಮಾವೇಶ ಮತ್ತು ಜಾಹೀರಾತುಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದ ಅವರು, “ಅಧಿಕಾರದಲ್ಲಿದ್ದ ಅವಧಿಗಿಂತ ಜನರ ಬದುಕಿನಲ್ಲಿ ಮಾಡಿದ ಬದಲಾವಣೆ ಮುಖ್ಯ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.



