Tuesday, May 19, 2026
Google search engine

Homeಸ್ಥಳೀಯಚಿರತೆ ದಾಳಿಯಿಂದ ಬಾಲಕ ಸಾವು ಪ್ರಕರಣ : ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು

ಚಿರತೆ ದಾಳಿಯಿಂದ ಬಾಲಕ ಸಾವು ಪ್ರಕರಣ : ಉಪ ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲು

ಚಾಮರಾಜನಗರ : ಜಿಲ್ಲೆಯ ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿಯಾದ ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ಸ್ವಯಂ ಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಘಟನೆ ಸಂಬಂಧ ದಿನಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಆಧಾರವಾಗಿಸಿಕೊಂಡು ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರು ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 7(2) ಹಾಗೂ 9(3)(ಬಿ) ಪ್ರಕಾರ ಅರಣ್ಯ ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ಕೈಗೊಂಡು ಸುಮೋಟೋ ಪ್ರಕ್ರಿಯೆ ಆರಂಭಿಸಲು ಆದೇಶ ಹೊರಡಿಸಿದ್ದಾರೆ.

ಮಲೆ ಮಹದೇಶ್ವರಬೆಟ್ಟ ವ್ಯಾಪ್ತಿಯ ನಾಗಮಲೆಗೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ವೇಳೆ ಇಂಡಿಗನತ್ತ ಗ್ರಾಮದ ಬಳಿ ಚಿರತೆಯೊಂದು ಬಾಲಕ ಹರ್ಷಿತ್ ಗೌಡನ ಮೇಲೆ ದಾಳಿ ನಡೆಸಿದ ಪರಿಣಾಮ ಬಾಲಕ ಮೃತಪಟ್ಟಿದ್ದನು. ಘಟನೆಯ ಬಳಿಕ ಬಾಲಕನ ತಾಯಿ ಪವಿತ್ರ ಅವರು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಮಗನ ಸಾವಿಗೆ ಕಾರಣವೆಂದು, ಅರಣ್ಯ ಅಧಿಕಾರಿ ಸಿಬ್ಬಂದಿ ನಮಗೆ ಕಾಡುಪ್ರಾಣಿಗಳು, ಚಿರತೆ ಇರುವ ಬಗ್ಗೆ ಹೇಳಿದ್ದರೆ ನಾವು ನಾಗಮಲೆಗೆ ತೆರಳುತ್ತಿರಲಿಲ್ಲ ಎಂದು ಹೇಳಿದ್ದರು.

ನಾಗಮಲೆಗೆ ತೆರಳುವ ಮಾರ್ಗದಲ್ಲಿ ಭಕ್ತರಿಂದ ತಲಾ 200 ರೂ. ಶುಲ್ಕ ವಸೂಲಿ ಮಾಡಲಾಗುತ್ತಿದ್ದರೂ, ಅಗತ್ಯ ಸುರಕ್ಷತಾ ಕ್ರಮಗಳು, ಕುಡಿಯುವ ನೀರಿನ ವ್ಯವಸ್ಥೆ, ಮಾಹಿತಿ ಫಲಕಗಳು, ಸುರಕ್ಷಿತ ಬೇಲಿ ಹಾಗೂ ಅರಣ್ಯ ಸಿಬ್ಬಂದಿ ನಿಯೋಜನೆ ಸೇರಿದಂತೆ ಸೌಲಭ್ಯಗಳನ್ನು ಒದಗಿಸಿಲ್ಲ ಎಂಬ ಗಂಭೀರ ಆರೋಪಗಳನ್ನು ಉಲ್ಲೇಖಿಸಲಾಗಿದೆ.

ಚಿರತೆ ದಾಳಿ ಪ್ರಕರಣಗಳು ಮರುಕಳಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು ಭಾರತ ಸಂವಿಧಾನದ 41ನೇ ವಿದೇಯವು ಸಾರ್ವಜನಿಕರ ಆರೋಗ್ಯ ಸುಧಾರಣೆ ರಾಜ್ಯದ ಪ್ರಾಥಮಿಕ ಕರ್ತವ್ಯವಾಗಿದೆ. ಸರ್ವೋಚ್ಚ ನ್ಯಾಯಾಲಯವು 21ನೇ ವಿದೇಯದಲ್ಲಿ ಮೂಲಭೂತ ಹಕ್ಕುಗಳನ್ನು ವಿಸ್ತರಿಸಿ ಅದರಲ್ಲಿ ಮೂಲಭೂತ ಹಕ್ಕುಗಳೊಂದಿಗೆ ಘನತೆಯಿಂದ ಬದುಕುವ ಹಕ್ಕನ್ನು ಸಾಕಷ್ಟು ಪೋಷಣೆ, ಬಟ್ಟೆ, ಆರೋಗ್ಯವಾದ ಜೀವನ ಎಲ್ಲ ಅಗತ್ಯಗಳನ್ನು ಸೇರಿಸಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ.

ಘಟನೆ ಸಂಬಂಧ 1) ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಕುಮಾರ್, 2) ಕಾವೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ, 3) ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ವಲಯ ಅಧಿಕಾರಿ ಮತ್ತು ಪ್ರಭಾರ ವಲಯ ಅರಣ್ಯಾಧಿಕಾರಿ ರಮೇಶ್ ಬಿರದಾರ್, 4) ಕಾವೇರಿ ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ವಾಗೀಶ್ ಅವರನ್ನು ಎದುರುದಾರರನ್ನಾಗಿ ಪರಿಗಣಿಸಿ ನೋಟಿಸ್ ಜಾರಿ ಮಾಡಲಾಗಿದೆ.

ದಿನಪತ್ರಿಕೆಯಲ್ಲಿ ಪ್ರಕಟವಾದ ಸಮಸ್ಯೆಗಳನ್ನು ಹಾಗೂ ಲೋಪಗಳನ್ನು ಸರಿಪಡಿಸಲು ಎದುರುದಾರರು ತಕ್ಷಣವೇ ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಸುದ್ದಿಯಲ್ಲಿ ಉಲ್ಲೇಖಿಸಲಾದ ಸಮಸ್ಯೆಗಳ ಕುರಿತು ನೋಟಿಸ್ ತಲುಪಿದ ನಾಲ್ಕು ವಾರಗಳೊಳಗೆ ತಮ್ಮ ಅಭಿಪ್ರಾಯಗಳನ್ನು ಮತ್ತು ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಉಪ ಲೋಕಾಯುಕ್ತರು ಸೂಚಿಸಿದ್ದಾರೆ. ಒಂದು ಮತ್ತು ನಾಲ್ಕನೇ ಎದುರುದಾರರಿಗೆ ನೋಟಿಸ್ ಮತ್ತು ಸಮನ್ಸ್ ಕಳುಹಿಸಿ ಮುಂದಿನ ದಿನಾಂಕದಂದು ಆಕ್ಷೇಪಣೆ ಮತ್ತು ವರದಿಯೊಂದಿಗೆ ಖುದ್ದು ಹಾಜರಾಗಬೇಕೆಂದು ಉಪ ಲೋಕಾಯುಕ್ತರು ನಿರ್ದೇಶನ ನೀಡಿದ್ದಾರೆ.

ಗಮನಿಸಿರುವ ಲೋಪ ದೋಷಗಳು/ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿಯಮಾನುಸಾರ ಅವಶ್ಯವಿರುವ ಕ್ರಮವಹಿಸಿ ಕೈಗೊಂಡ ಕ್ರಮದ ಕುರಿತು ವರದಿಯನ್ನು ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 17ಕ್ಕೆ ನಿಗದಿಪಡಿಸಲಾಗಿದೆ

RELATED ARTICLES
- Advertisment -
Google search engine

Most Popular